ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್.ವೈ.ಮೇಟಿ ಪುಷ್ಪ ಅರ್ಪಿಸಿದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಬಾದಾಮಿ ಆದರ್ಶ ವಿದ್ಯಾಲಯದ ಶಿಕ್ಷಕ ಶ್ರೀನಿವಾಸ ಈಳಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಇದ್ದರು 
ಜಿಲ್ಲೆ

ಮಾನವ ಕುಲ ಒಂದೇ ಎಂದು ಸಾರಿದವರು ನಾರಾಯಣ ಗುರು

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ : ನೂರಾರು ವರ್ಷಗಳ ಹಿಂದೆ ದೇಶದಲ್ಲಿ ಬಾಲ್ಯವಿವಾಹ, ಸತಿ ಸಹಗಮನ, ಜೀತ ಪದ್ಧತಿ, ಮೇಲು-ಕೀಳು ಹಾಗೂ ಪ್ರಾಣಿ ಬಲಿ ಹೀಗೆ ಮುಂತಾದ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆಗೊಳಿಸಿ ಮಾನವ ಕುಲ ಒಂದೇ ಎಂದು ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿ ಮಾತನಾಡಿದರು.

ಲೋಕ ಕಲ್ಯಾಣಕ್ಕಾಗಿ ತುಳಿತಕ್ಕೆ ಒಳಗಾದ ಜನಾಂಗದ ಸುಧಾರಣೆಗಾಗಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಅನೇಕ ಮಠ ಮಂದಿರಗಳನ್ನು ನಿರ್ಮಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಆಧ್ಯಾತ್ಮಿಕ ಚಿಂತಕರಾಗಿದ್ದರು ಎಂದರು.

ಇಂತಹ ಮಹಾನ್ ಗುರುಗಳಿಂದ ನಾಡು ಪಾವನಗೊಂಡಿದ್ದು, ಅವರನ್ನು ಗೌರವಿಸುವ ಹಾಗೂ ತತ್ವಾದರ್ಶ ಅನುಕರಣೆ ಮಾಡುವ ಉದ್ದೇಶದಿಂದ ಸರ್ಕಾರ ಪ್ರತಿವರ್ಷ ಜಯಂತಿ ಆಚರಿಸುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ಜಾತಿ ಭೇದವನ್ನು ಹೋಗಲಾಡಿಸಿ ಸಮಾನತೆ ಕಾಣಲು 12ನೇ ಶತಮಾನದಲ್ಲಿ ಕ್ರಾಂತಿಗಳಾದವು. ಅನೇಕ ಶರಣರು ಸಮಾಜ ಸುಧಾರಣೆಗೆ ಮುಂದಾದರು. ಅವರ ನಂತರ ಬಂದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಹ ಮಾನವ ಕುಲ ಒಂದೇ ಆಗಿದ್ದು, ನಾವು ಮಾಡುವ ಕಾಯಕದಿಂದ ಜಾತಿಗಳು ಹುಟ್ಟಿಕೊಂಡಿವೆ ಎಂದು ಹೇಳಿ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ಎಲ್ಲರಲ್ಲೂ ಸಮಾನತೆ ಕಾಣಲು ಅನೇಕ ಮಹಾ ಪುರುಷರ ಜಯಂತಿಗಳನ್ನು ಸರ್ಕಾರ ಮಟ್ಟದಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಬಾದಾಮಿ ಆದರ್ಶ ವಿದ್ಯಾಲಯದ ಶಿಕ್ಷಕ ಶ್ರೀನಿವಾಸ ಈಳಗೇರ ಉಪನ್ಯಾಸ ನೀಡಿ, ವಿರಾಜ ಮಾನರಾಗಿರುವ ಬ್ರಹ್ಮಶ್ರೀ ನಾರಾಯಣಗುರು, ಬಸವಣ್ಣನವರು ಸೇರಿ ಅನೇಕರು ಮಹಾ ವಿಶ್ವಗುರುಗಳಾಗಿ ಹೊರಹೊಮ್ಮಿದ್ದಾರೆ. ಕೇರಳದ ತಿರವಂತಪುರದಲ್ಲಿ ಹುಟ್ಟಿದ ನಾರಾಯಣ ಗುರುಗಳು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಸಲುವಾಗಿ ಕೇರಳದ ಜಾತಿ ಪೀಡಿತ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಸುಧಾರಣಾ ಚಳವಳಿ ನಡೆಸಿದರು. ಇದರ ಪರಿಣಾಮವಾಗಿ ದೇವಾಲಯವನ್ನು ತೆರೆಯಲು ಮತ್ತು ಮೂರು ರಸ್ತೆಗಳನ್ನು ಜನರಿಗೆ ತಲುಪಿಸಲು ಕಾರಣವಾಯಿತು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ, ಸಮುದಾಯದ ಮುಖಂಡರಾದ ಮಹಾಂತೇಶ ಇಳಗೇರ, ಮುತ್ತು ಕರಡಿ ಸೇರಿ ಇತರರು ಉಪಸ್ಥಿತರಿದ್ದರು.