ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ೭೬ನೇ ಗಣರಾಜ್ಯೋತ್ಸವವನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶಕ್ಕಾಗಿ ಮಡಿದ ವೀರರನ್ನು ಸ್ಮರಿಸಿ ವೈದ್ಯಕೀಯ ವೃತ್ತಿಯಲ್ಲಿರುವ ನಾವೆಲ್ಲರೂ ಸಮಾಜಕ್ಕೆ ಸೇವೆ ನೀಡುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು.
ಶೈಕ್ಷಣಿಕವಾಗಿ ವರ್ಷದಿಂದ ವರ್ಷಕೆ ಹೊಸ ಹೊಸ ಕೊರ್ಸ್‌ಗಳನ್ನು ಸಂಸ್ಥೆಯಲ್ಲಿ ಪ್ರಾರಂಬಿಸಲಾಗುತ್ತಿದ್ದು, ಅದರಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ನೂತನವಾಗಿ ೨೭ ಎಂಬಿಬಿಎಸ್ ಸ್ನಾತಕೋತ್ತರ ಕೋರ್ಸ್ ಮಂಜೂರಾಗಿರುತ್ತದೆ. ಸಂಸ್ಥೆಯಲ್ಲಿ ವೈದ್ಯಕೀಯ ವಿಭಾಗದಲ್ಲಿ ವೈದ್ಯರ ಕೊರತೆ ಇರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೆಎಂಸಿ ವೈದ್ಯಕೀಯ ಕಾಲೇಜಿನಿಂದ ೪ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳನ್ನು ಡಿಆರ್‌ಪಿ ಯೋಜನೆಯಡಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಗೆ ನಿಯೋಜಿಸಲಾಗಿರುತ್ತದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಪ್ರಸ್ತುತ ಇರುವ ೧೫೦ ಎಂಬಿಬಿಎಸ್ ಸೀಟುಗಳನ್ನು ೨೦೦ಕ್ಕೆ ಹೆಚ್ಚಿಸಲು ರಾಷ್ಟ್ರೀಯ ವೈದ್ಯಕೀಯ ಪರಿಷತ್ ಗೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಕೆ.ಎಂ.ರೋಹಿಣಿ, ಜೀವ ರಸಾಯಾನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ.ಕಾರ್ಯಪ್ಪ, ಬಿ.ಎಸ್ಸಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಎ.ಕೆ.ಮಂಜುಳ ಮಾತನಾಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ವೈದ್ಯರುಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಎಂಬಿಬಿಎಸ್, ಬಿ.ಎಸ್ಸಿ ನರ್ಸಿಂಗ್, ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.