ಬೆಂಗಳೂರು: ದೇಶಾದ್ಯಂತ ಐದು ರಾಜ್ಯಗಳಲ್ಲಿ ವಿವಿಧ ವ್ಯಾಪಾರೋದ್ಯಮ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿದೆ. ಈ ಸಂಸ್ಥೆಗಳ ವಿರುದ್ಧದ ತೆರಿಗೆ ವಂಚನೆ ಕೇಸ್ನ ತನಿಖೆ ಪ್ರಗತಿಯಲ್ಲಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುವ ಸಲುವಾಗಿ ಅಧಿಕಾರಿಗಳ ತಂಡ 400ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದೆ.
ದೆಹಲಿ, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಈ ದಾಳಿ ಆಗಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ. ಮದ್ಯ ಉತ್ಪಾದನಾ ಮತ್ತು ಮಾರಾಟ ಕಂಪನಿಗಳು, ಡೇರಿ ಮತ್ತು ಹಾಲು, ರಿಯಲ್ ಎಸ್ಟೇಟ್, ಲಾಜಿಸ್ಟಿಕ್ಸ್ ಮುಂತಾದ ವಹಿವಾಟಿನಲ್ಲಿ ತೊಡಗಿರುವ ಕಂಪನಿಗಳ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ.
ರಿಯಲ್ ಎಸ್ಟೇಟ್ ಕಂಪನಿ ಎಂಬೆಸ್ಸಿ ಗ್ರೂಪ್ಗೆ ಸೇರಿದ ಕರ್ನಾಟಕ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿನ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಬೆಂಗಳೂರು, ಗುರುಗ್ರಾಮ ಮತ್ತು ಮುಂಬೈನಲ್ಲಿ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂಬೆಸ್ಸಿ ಗ್ರೂಪ್ ಮತ್ತೊಂದು ರಿಯಲ್ ಎಸ್ಟೇಟ್ ಕಂಪನಿ ಇಂಡಿಯಾಬುಲ್ಸ್ ಜತೆ ವಿಲೀನ ಹೊಂದಿದ್ದು, ಅಲ್ಲೂ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಇದು ಮಾಮೂಲಿ ವಿಚಾರಣೆ. ಕಂಪನಿಯು ಎಲ್ಲ ನಿಯಮಗಳನ್ನು ಪಾಲಿಸುತ್ತದೆ‘ ಎಂದು ಎಂಬೆಸ್ಸಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ. ಕರ್ನಾಟಕದಲ್ಲಿ ಎಂಬೆಸ್ಸಿ ಗ್ರೂಪ್ನ ಕೆಲ ಮುಖ್ಯಸ್ಥರು ಹಾಗೂ ಇತರ ಉದ್ಯಮಿಗಳ ಕಚೇರಿ, ನಿವಾಸ ಸೇರಿ 30ಕ್ಕೂ ಅಧಿಕ ಕಡೆ ಏಕಕಾಲದಲ್ಲಿ ಗೋವಾ-ಕರ್ನಾಟಕ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕೋಟ್ಯಂತರ ರೂ. ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಜಪ್ತಿ ಮಾಡಿಕೊಂಡಿದೆ. ದಾಳಿಗೊಳಗಾದ ಉದ್ಯಮಿಗಳು ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಹಾಗೂ ಭಾರಿ ಪ್ರಮಾಣದ ಆದಾಯ ಮರೆ ಮಾಚಿರುವ ಕುರಿತು ಐಟಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿತ್ತು. ಈ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಎಂಬೆಸ್ಸಿ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ, ನಿರ್ದೇಶಕ ನರಪತ್ ಸಿಂಗ್ ಚರೋರಿಯಾ ಸೇರಿ 6ಕ್ಕೂ ಹೆಚ್ಚಿನ ಉದ್ಯಮಿಗಳಿಗೆ ಐಟಿ ಶಾಕ್ ಕೊಟ್ಟಿದ್ದು, ಇವರ ಮನೆ, ಕಚೇರಿಗಳಲ್ಲಿ ಪರಿಶೀಲಿಸಿದಾಗ ಪತ್ತೆಯಾದ ಕಂಪನಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಖಾತೆ ವಿವರಗಳು ಹಾಗೂ ಬ್ಯಾಂಕ್ ಮೂಲಕ ನಡೆಸಿದ ಹಣಕಾಸಿನ ವ್ಯವಹಾರದ ಆನ್ಲೈನ್ ಸಾಕ್ಷ್ಯಗಳು ಐಟಿ ಕೈ ಸೇರಿವೆ. ನರಪತ್ ಸಿಂಗ್ ಚರೋರಿಯಾ ಒಡೆತನದ ಸದಾಶಿವನಗರದ ಎಂಬೆಸ್ಸಿ ಆರ್ಕೆಡ್ ಅಪಾರ್ಟ್ವೆುಂಟ್ನ ಫ್ಲಾ್ಯಟ್ನಲ್ಲಿ ನಾಲ್ವರು ಅಧಿಕಾರಿಗಳ ತಂಡ ಕೋಟ್ಯಂತರ ರೂ. ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ, ಆಸ್ತಿ ಪತ್ರಗಳನ್ನು ಪರಿಶೀಲಿಸಿದೆ. ಬೆಂಗಳೂರಿನಲ್ಲಿ ಒಟ್ಟು 10 ಕಡೆ ದಾಳಿ ನಡೆದಿದ್ದು, ದಾಳಿಗೊಳಗಾದವರು ಮೂಲ ಆದಾಯ ತೋರಿಸದೆ ತೆರಿಗೆ ವಂಚಿಸಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿದೆ.
ಮಾಜಿ ಸಚಿವ ಟಾರ್ಗೆಟ್?: ದಾಳಿಗೊಳಗಾದ ಕಂಪನಿಯೊಂದರಲ್ಲಿ ಕರ್ನಾಟಕದ ಪ್ರಭಾವಿ ಮಾಜಿ ಸಚಿವರೊಬ್ಬರು ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ಆದರೆ, ತಾವು ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿರುವುದಕ್ಕೆ ಯಾವುದೇ ದಾಖಲೆ ತೋರಿಸಿಲ್ಲ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಅಧಿಕಾರಿಗಳು ಈ ಹಿಂದೆ ವಿಚಾರಣೆ ನಡೆಸಿದ್ದರು. ಇವರನ್ನು ಟಾರ್ಗೆಟ್ ಮಾಡಿಯೇ ಈ ದಾಳಿ ನಡೆಸಲಾಗಿದೆ ಎಂಬ ಆರೋಪವೂ ಇದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕಾರಣಿಗಳು ಹಣ ಹೂಡಿಕೆ ಮಾಡಿರುವ ಹಲವು ಕಂಪನಿಗಳ ಮೇಲೆ ಸದ್ಯದಲ್ಲೇ ಐಟಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬರುತ್ತಿವೆ.