ಮಂಗಳೂರು : ಮಂಗಳೂರಿನ ದೇರೆಬೈಲ್ ಪ್ರದೇಶದ ಬ್ಲೂಬೆರಿ ಹಿಲ್ಸ್‌ನಲ್ಲಿ ಕಿಯೊನಿಕ್ಸ್‌ಗೆ ಸೇರಿದ 4 ಎಕರೆ ಪ್ರದೇಶದಲ್ಲಿ ಹೊಸ ಐಟಿ ಪಾರ್ಕ್ ನಿರ್ಮಿಸಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ 4 ಲಕ್ಷ ಚದರ ಅಡಿಯ ಕಟ್ಟಡ ಸಹಿತ ಐಟಿ ಕಂಪೆನಿಗಳಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ವತಿಯಿಂದ ನಗರದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಮಂಗಳವಾರ ನಡೆದ ಮಂಗಳೂರು ಟೆಕ್ನೋವಾಂಜಾ 3.0 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೊಸ ಐಟಿ ಪಾರ್ಕ್‌ನಲ್ಲಿ ಸಾಗರ ತಂತ್ರಜ್ಞಾನ, ಸಾಗರ ಜೈವಿಕ ತಂತ್ರಜ್ಞಾನ ವಲಯದ ಕಂಪನಿಗಳು ಹಾಗೂ ಸ್ಟಾರ್ಟ್‌ಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೌಶಲಾಭಿವೃದ್ಧಿ ಕೇಂದ್ರಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದರು.
ಮಂಗಳೂರು ಬ್ಯಾಂಕಿಂಗ್, ಆತಿಥ್ಯ ಹಾಗೂ ಆರೋಗ್ಯ ಸೇವೆಯಲ್ಲಿ ಮುಂಚೂಣಿಯ ನಗರವಾಗಿದೆ. ಉನ್ನತ ದರ್ಜೆಯ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಇಲ್ಲಿನ ಪ್ರತಿಭಾನ್ವಿತರು ಸ್ಥಳೀಯವಾಗಿ ಉದ್ಯಮ ಆರಂಭಿಸಿ ಇಲ್ಲಿನವರಿಗೆ ಉದ್ಯೋಗಾವಕಾಶ ಸೃಷ್ಟಿಸುವಂತಾಗಬೇಕು. ಅದಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ಕಲ್ಪಿಸುತ್ತದೆ ಎಂದು ಅವರು ಹೇಳಿದರು.
*ನಿಬಂಧನೆ ಸರಳ
ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಏಕರೂಪ ಕೌರ್ ಮಾತನಾಡಿ ‘ ಸ್ಥಳೀಯ ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ’ಪ್ರಾಶಸ್ತ್ಯ ಸಾರ್ವಜನಿಕ ಸಂಗ್ರಹಣೆ ನೀತಿ’ ರೂಪಿಸುತ್ತಿದೆ. ರಾಜ್ಯದ ಸ್ಟಾರ್ಟ್ ಅಪ್‌ಗಳು ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ನಿಬಂಧನೆ ಸಡಿಲಗೊಳಿಸಲು ತೀರ್ಮಾನಿಸಲಾಗಿದೆ ಎಂದರು
ಸರ್ಕಾರದ ಸೆಕ್ಟರ್ ಆಧಾರಿತ ನೀತಿಗಳಿಂದ ರಾಜ್ಯಕ್ಕೆ ಹೂಡಿಕೆ ಹರಿದು ಬರುತ್ತಿದ್ದು ಇಲೆಕ್ಟ್ರಾನಿಕ್ ವಲಯಕ್ಕೆ ಹೆಚ್ಚಿನ ಹೂಡಿಕೆ ಬರುತ್ತಿದೆ. ಅನಿಮೇಷನ್ ವಿಷುಯಲ್ ಎಫೆಕ್ಟ್ಸ್, ಗೇಮ್ಸ್ ಮತ್ತು ಕಾಮಿಕ್ಸ್ (ಎವಿಜಿಸಿ) ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಮುಂದಿನ 4 ವರ್ಷಗಳಲ್ಲಿ ಸುಮಾರು 30,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಇದರಿಂದ ಮಂಗಳೂರಿನಂತ ಉದಯೋನ್ಮುಖ ಕ್ಲಸ್ಟರ್‌ಗಳಲ್ಲಿ ಉದ್ಯಮಶೀಲ ಪರಿಸರ ವ್ಯವಸ್ಥೆ ಬಲಗೊಳುತ್ತಿದೆ ಎಂದು ಅವರು ಹೇಳಿದರು.
*ಸಿಲಿಕಾನ್ ಬೀಚ್
2001ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಸಣ್ಣ ಐಟಿ ಪಾರ್ಕ್ ಈಗ ’ಸಿಲಿಕಾನ್ ಬೀಚ್’ ಆಗಿ ಹೊರಹೊಮ್ಮುವ ಮಟ್ಟಕ್ಕೆ ಬೆಳೆದಿದೆ. ಕಳೆದ 18 ತಿಂಗಳಲ್ಲಿ ಮಂಗಳೂರಿನಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಹೂಡಿಕೆ ಮಾಡಿದ್ದು, 25-30 ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿವೆ. ಮುಂದಿನ 2 ದಶಕಗಳಲ್ಲಿ ಮಂಗಳೂರು ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಲಿದೆ ಎಂದು ಕೆಡಿಇಎಂ ಅಧ್ಯಕ್ಷ ಬಿ.ವಿ ನಾಯ್ಡು ಹೇಳಿದರು.
ಕೆಡಿಇಎಂನ ಸಿಇಒ ಸಂಜೀವ್ ಗುಪ್ತಾ, ದಿ ಮಿಲ್, ಟೆಕ್ನಿಕಲರ್ ಕ್ರಿಯೇಟಿವ್ ಸ್ಟುಡಿಯೋಸ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಕೆ ಚಂದ್, ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಚಂದ್ರು ಅಯ್ಯರ್, ಆಕ್ಸೆಂಚರ್‌ನ ಆರತಿ ಕುಚಿಬಟ್ಲ, ಡೆಲಿವರಿ ಸಂಸ್ಥೆಯ ಸಿಇಒ ಅಜಿತ್ ಪೈ, 99 ಗೇಮ್ಸ್ ಸಿಇಒ ರೋಹಿತ್ ಭಟ್ ಉಪಸ್ಥಿತರಿದ್ದರು.