ಬೆಳಗಾವಿ: ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆ ವ್ಯಾವಹಾರಿಕವಾಗಿ ಎರಡನೇ ರಾಜಧಾನಿಯಾಗಿದೆ. ಅಲ್ಲದೆ, ಫೌಂಡ್ರಿ ಉದ್ಯಮದಲ್ಲಿ ಮಂಚೂಣಿಯಲ್ಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಆದಾಯ ತೆರಿಗೆ (ಐಟಿ) ಇಲಾಖೆ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಬಾರದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಬೆಳಗಾವಿಯಲ್ಲಿ ಬ್ರಿಟಿಷರ ಕಾಲದಿಂದಲೂ ವಿಭಾಗೀಯ ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮೂರು ರಾಜ್ಯಗಳ ವಾಣಿಜ್ಯ ಕೊಂಡಿಯಾಗಿದೆ. ಸ್ಮಾರ್ಟ್ ಸಿಟಿಯಾಗಿಯೂ ನಿರ್ಮಾಣಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಐಟಿ ಕಚೇರಿ ಸ್ಥಳಾಂತರ ಮಾಡುವುದು ಸೂಕ್ತವಲ್ಲ ಎಂದರು. ಬೆಳಗಾವಿಯಲ್ಲಿ ವಿವಿಧ ವಲಯದಲ್ಲಿ ಉತ್ಪಾದನೆಯಾಗುವ ವಸ್ತುಗಳು ವಿವಿಧ ದೇಶಗಳಿಗೆ ರಫ್ತಾಗುತ್ತಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.
ವಾರ್ಷಿಕ ಸಾವಿರಾರು ಕೋಟಿ ರೂ. ವ್ಯಾಪಾರ ವಹಿವಾಟು ನಡೆಯುತ್ತಿದೆ. ಈಗಾಗಲೇ ಡಿಜಿಎಫ್‌ಟಿ ಕಚೇರಿ ಕಾರ್ಯನಿರ್ವಹಸುತ್ತಿದೆ. ಇದೀಗ ತೆರಿಗೆ ಇಲಾಖೆಗಳನ್ನು ಡಿಜಿಟಲ್ ಮಾದರಿ ಮಾಡುವ ನೆಪದಲ್ಲಿ ಬೆಳಗಾವಿ ಕಚೇರಿ ಸ್ಥಳಾಂತರ ಪ್ರತಿಕ್ರಿಯೆ ಕೆಲಸ ಕೈಬಿಡಬೇಕು ಎಂದು ಒತ್ತಾಯಿಸಿದರು.