ಜಿಲ್ಲೆ

ಸತತ ಅಧ್ಯಯನದಿಂದ ಅಂಕ ಗಳಿಕೆ ಬಲು ಸುಲಭ

ಬಸವರಾಜ ವೀರಪ್ಪ ಗರಗ

ಭಟ್ಕಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಲಯನ್ಸ್ ಕ್ಲಬ್ ಮುರ್ಡೆಶ್ವರ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಪಟ್ಟಣದ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಗಳಿಸಲು ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ನಡೆಯಿತು.

ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಡಾ. ಅಶೋಕ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕ ಗಳಿಸಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳಿಸಿದರು. ಸೂಕ್ತ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಅಂಕಗಳನ್ನು ಗಳಿಸುವುದು ಕಷ್ಟವಲ್ಲ ಎಂಬುದನ್ನು ವಿಶ್ಲೇಷಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಭಟ್ಕಳ ತಾಲೂಕಿನ ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸುವ ಮೂಲಕ ಕೀರ್ತಿ ಪತಾಕೆ ಹಾರಿಸುವಂತಾಗಬೇಕು. ಈ ವರ್ಷ ಭಟ್ಕಳ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಬೇಕು. ಅದಕ್ಕೆ ಬೇಕಾದ ಹಲವು ಕಾರ್ಯಾಗಾರಗಳನ್ನು ನಡೆಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಘವೇಂದ್ರ ನಾಯ್ಕ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ಮಡಿವಾಳ, ಸದಸ್ಯ ಎಂ.ವಿ. ಹೆಗಡೆ, ಕಾರ್ಯದರ್ಶಿ ನಾಗೇಶ ಮಡಿವಾಳ, ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ರೂಪಾ ಖಾರ್ವಿ, ಎನ್​ಇಎಸ್ ಮುಖ್ಯಾಧ್ಯಾಪಕ ಗಣಪತಿ ಶಿರೂರು, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ ನಾಯ್ಕ, ಇತರರು ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ, ಶಿಕ್ಷಕ ಶ್ರೀಧರ ಶೇಟ್ ಹಾಗೂ ಶಿಕ್ಷಣ ಸಂಯೋಜಕ ಅಶೋಕ ಆಚಾರಿ ಕಾರ್ಯಕ್ರಮ ನಿರ್ವಹಿಸಿದರು.

ನಂತರ ಸಂಪನ್ಮೂಲ ಶಿಕ್ಷಕರಿಂದ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿಷಯವಾರು ತರಬೇತಿ ನೀಡಲಾಯಿತು. ಆಯಾ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಲು ಯಾವ ರೀತಿಯಲ್ಲಿ ಅಧ್ಯಯನ ನಡೆಸಬೇಕು ಎಂಬುದನ್ನು ಸ್ಪಷ್ಟ ಪಡಿಸಲಾಯಿತು. ತಾಲೂಕಿನ ಸುಮಾರು ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.