ಮೈಸೂರು: ಮೋಜಿನ ಕ್ರಿಕೆಟ್‌ಗೆ ಪ್ರಶಸ್ತಿ ಕೊಡುವ ಸರ್ಕಾರಗಳಿಗೆ ಪರಿಸರದ ಬಗ್ಗೆ ಗಂಭೀರವಾದ ಕಾಳಜಿ ಇಲ್ಲದಿರುವುದು ದೌರ್ಭಾಗ್ಯವೇ ಸರಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಬನ್ನೂರಿನ ಸರ್ಕಾರಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ರಕ್ಷಣೆ ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಎಂಬುದನ್ನು ಮರೆತಿದ್ದಾರೆ. ಗೋಮಾಳ, ಕೆರೆಕಟ್ಟೆಗಳು, ಮೀಸಲು ಅರಣ್ಯಗಳು ಬಲಾಢ್ಯರ ಪಾಲಾಗುತ್ತಿವೆ. ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಸುಪ್ರೀಂಕೋರ್ಟ್ ಕಠಿಣ ಸೂಚನೆ ಇದ್ದರೂ ಪರಿಸರ ರಕ್ಷಣೆ ಮಾಡಲು ಅಧಿಕಾರಿಗಳು ನಿರ್ಲಕ್ಷೃ ಮಾಡುತ್ತಿದ್ದಾರೆ. ಇದು ಪರಿಸರ ನಾಶಕ್ಕೆ ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ನೈಸರ್ಗಿಕ ಸಂಪತ್ತು ಏರಿಕೆಯಾಗುತ್ತಿಲ್ಲ. ಆದ್ದರಿಂದಲೇ ಹವಾಮಾನ ವೈಪರೀತ್ಯವಾಗುತ್ತಿದೆ. ಕೃಷಿ ಕ್ಷೇತ್ರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರೈತರು ಜಾಗೃತರಾಗಿ ಪರಿಸರದ ಉಳಿವಿಗಾಗಿ ಮರ ಗಿಡ ಬೆಳೆಸಿ ಮುಂದಿನ ತಲೆಮಾರಿಗೆ ಒಳ್ಳೆಯ ಸಂದೇಶ ನೀಡಿ ಹೋಗಬೇಕು ಎಂದು ತಿಳಿಸಿದರು.
ಸಾಹಿತಿ ಬನ್ನೂರು ರಾಜು ಮಾತನಾಡಿ, ಪರಿಸರ ಉಳಿದಿರುವುದು ರೈತರಿಂದಲೇ. ಕೃಷಿಕರು ಇದನ್ನು ಮತ್ತಷ್ಟು ಸಂರಕ್ಷಿಸಲು ಚಿಂತಿಸಬೇಕು. ಸರ್ವ ರೋಗಕ್ಕೂ ಪರಿಸರವೇ ಮದ್ದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರೂ ಎಲ್ಲವನ್ನೂ ಮರೆಯುತ್ತಿದ್ದೇವೆ. ನಾವು ಎಚ್ಚೆತ್ತುಕೊಳ್ಳಬೇಕು ಎಂದರು.
ಅರಣ್ಯ ಅಧಿಕಾರಿ ಆಂತೋನಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. 15 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ರೈತರಿಗೂ ಉಚಿತವಾಗಿ ಸಸಿ ವಿತರಿಸಲಾಯಿತು. ಪ್ರಾಚಾರ್ಯರಾದ ಗೋಲಿಗೌಡ, ರವೀಶ್, ಶಿಕ್ಷಕರಾದ ಚಿನ್ನಸ್ವಾಮಿ, ತಿಬ್ಬೇಗೌಡ, ಕುಮಾರ್, ಕಬ್ಬು ಬೆಳೆಗಾರರ ಸಂಘದ ಅತ್ತಳ್ಳಿ ದೇವರಾಜ್, ಕಿರಗಸೂರು ಶಂಕರ್, ಸಿ.ನಿಂಗಣ್ಣ, ಬನ್ನೂರು ಸೂರಿ, ಅರುಣ್ ಕುಮಾರ್, ಕುಂತನಹಳ್ಳಿ ಸ್ವಾಮಿ, ಪಿ.ನವೀನ್, ಶಿವರಾಜ್, ಕುಳ್ಳೇಗೌಡ, ರೇವಣ್ಣ, ಮೆಡಿಕಲ್ ಮಹೇಶ್, ರಾಮಲಿಂಗೇಗೌಡ, ಹನುಮನಾಳು ಲೋಕೇಶ್, ಜಗದೀಶ್ ಇತರರು ಇದ್ದರು.