ಬಾಳೆಹೊನ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚೇತನಾ, ರಮಿತಾ ಅವರನ್ನು ಸನ್ಮಾನಿಸಲಾಯಿತು. ಪೂರ್ಣೇಶ್, ಭಾರತಿ, ವೆಂಕಟೇಶ್, ಸತೀಶ್, ಕೊಟ್ರೇಶಪ್ಪ, ರತ್ನಾಕರ್, ತಮನ್ನಾ ಇತರರಿದ್ದರು. 
ಜಿಲ್ಲೆ

ಜ್ಞಾನದೆಡೆಗೆ ಕೊಂಡೊಯ್ಯುವುದು ಶಿಕ್ಷಕನ ಕರ್ತವ್ಯ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವುದೇ ಶಿಕ್ಷಕನ ಕರ್ತವ್ಯ ಎಂದು ಎಸ್‌ಜೆಆರ್ ಕಾಲೇಜು ಉಪನ್ಯಾಸಕಿ ಭಾರತಿ ಹೇಳಿದರು.

ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಆರ್.ಪುರ ತಾಲೂಕು ಕಸಾಪ ಮಂಗಳವಾರ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಮಾತನಾಡಿದರು.
ಶಿಕ್ಷಣ ನಮ್ಮನ್ನು ಪರಿಪೂರ್ಣತೆಯೆಡೆಗೆ ತೆಗೆದುಕೊಂಡು ಹೋಗಲಿದೆ. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸುವ ಗುಣ ಎಲ್ಲ ವಿದ್ಯಾರ್ಥಿಗಳಲ್ಲಿಯೂ ಇದೆ. ಆದರೆ ಅವರನ್ನು ತಿದ್ದಿ ಒಂದು ಹಂತಕ್ಕೆ ತರುವುದು ಶಿಕ್ಷಕರು. ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಶಿಕ್ಷಕರಲ್ಲಿ ಧನ್ಯತಾ ಭಾವ ಮೂಡಲಿದೆ. ಶಿಕ್ಷಕರೂ ವಿದ್ಯಾರ್ಥಿಗಳೊಂದಿಗೆ ನಿತ್ಯವೂ ಕಲಿಕೆಯಲ್ಲಿ ತೊಡಗಿ ಮಕ್ಕಳಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಮಾತನಾಡಿ, ಕನ್ನಡವನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು. ತಾಲೂಕು ಕಸಾಪ ಘಟಕ ಶ್ರಾವಣ ಸಂಜೆ ಕಾರ್ಯಕ್ರಮದ ಮೂಲಕ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಕನ್ನಡ ಪಸರಿಸುವ ಕೆಲಸ ಮಾಡುತ್ತಿದೆ. ಕನ್ನಡ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳೂ ಓದಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಅನನ್ಯ ಪ್ರತಿಭೆ ಅಡಗಿದ್ದು, ಹೊರತರುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚೇತನಾ, ರಮಿತಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪವಿತ್ರಾ ಮೇರಿ ಪ್ರಥಮ, ಹರ್ಷಿಣಿ ದ್ವಿತೀಯ, ಶ್ಯಾಮಲಾ ತೃತೀಯ ಸ್ಥಾನ ಪಡೆದರು.
ಹೋಬಳಿ ಕಸಾಪ ಅಧ್ಯಕ್ಷ ರತ್ನಾಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಸುಧೀರ್, ಮುಖ್ಯಶಿಕ್ಷಕ ಕೊಟ್ರೇಶಪ್ಪ, ಎಸ್‌ಡಿಎಂಸಿ ಸದಸ್ಯ ಎಸ್.ಎಚ್.ಮೊಯ್ಯದ್ದಿ, ಶಿಕ್ಷಕರಾದ ತಮನ್ನಾ ಮುನಾವರ್, ರಾಮಪ್ಪ ಛಲವಾದಿ, ಕಸಾಪ ಸದಸ್ಯರಾದ ಕೃಷ್ಣ ಭಟ್, ಶೇಖರ್ ಇಟ್ಟಿಗೆ ಇತರರಿದ್ದರು.