ಬನ್ನೂರು: ಸುಂದರ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವ, ಸತ್ಪ್ರಜೆಯನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಹೊತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಎನ್‌ಸಿಆರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಸಿ.ರಾಜೇಶ್ ಹೇಳಿದರು.
ಪಟ್ಟಣದ ಸಮೀಪದ ತುರಗನೂರು ಗ್ರಾಮದಲ್ಲಿರುವ ಎನ್‌ಸಿಆರ್ ವಿದ್ಯಾಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬನ್ನೂರು ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಕಡಿಮೆ ಇಲ್ಲ. ನಗರ ಪ್ರದೇಶಗಳಿಗೆ ಹೋಗಿ ವಿದ್ಯೆ ಕಲಿಯಲಾಗದಿದ್ದರೂ ಅದೇ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲೇ ವಿದ್ಯೆ ಕಲಿಯುವಂತಾಗಲಿ ಎನ್ನುವ ಮಹಾದಾಸೆಯಲ್ಲಿ ಎನ್‌ಸಿಆರ್ ಶಿಕ್ಷಣ ಸಂಸ್ಥೆ ಆರಂಭಿಸಿದ್ದು, ಇಂದು ಎಷ್ಟೋ ಬಡ ಮಕ್ಕಳ ಆಶಾಕಿರಣವಾಗಿ ಶಿಕ್ಷಣ ಸಂಸ್ಥೆಯು ರೂಪುಗೊಂಡಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಶೋಭಾ ಮಾತನಾಡಿ, ಎಲ್ಲ ಮಕ್ಕಳಲ್ಲೂ ಸುಪ್ತ ಪ್ರತಿಭೆ ಇರುತ್ತದೆ. ಅದನ್ನು ಹೊರಗೆ ತರಲು ಸೂಕ್ತ ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವ ಮಕ್ಕಳ ಸಹಪಠ್ಯ ಚಟುವಟಿಕೆಗೆ ಭದ್ರ ಬುನಾದಿ ಎಂದರು.
ಎಂ.ಎಲ್‌ಹುಂಡಿ ವಿರಕ್ತ ಮಠದ ಗೌರಿಶಂಕರ ಸ್ವಾಮೀಜಿ ಮಾತನಾಡಿ, ತುಂಬಿದ ಕೊಡ ತುಳಕುವುದಿಲ್ಲ ಎನ್ನುವುದಕ್ಕೆ ಇಲ್ಲಿನ ಶಿಕ್ಷಕರೇ ನಿದರ್ಶನ. ಮಕ್ಕಳಿಗೆ ಶಿಸ್ತು, ಸಂಯಮ, ನೀತಿ ಬೋಧನೆಯ ಮೂಲಕ ಉತ್ತಮ ಶಿಕ್ಷಣ ನೀಡುತ್ತಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿ ಎಂದರು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದ ಭೂಮಿಕಾ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕವನ್ನು ಪಡೆದ ಟಿ.ಆರ್.ಗೌರಿಶಂಕರ ಅವರನ್ನು ಅಭಿನಂದಿಸಲಾಯಿತು.
ಪ್ರಸಕ್ತ ಸಾಲಿನ ದ್ವಿತೀಯ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ 5 ಗ್ರಾಂ ಚಿನ್ನದ ಪಾರಿತೋಷಕ ನೀಡುವುದಾಗಿ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಘೋಷಣೆ ಇದೇ ವೇಳೆ ಘೋಷಿಸಿದರು.
ವಿದ್ಯಾಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಆದಿಶಕ್ತಿ ಗುರುಕುಲ ಸಂಸ್ಥಾಪಕ ಬೋಳಪ್ಪ ಗುರೂಜಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಸುರೇಶ್, ಚಿತ್ರನಟಿ ಭೂಮಿಕಾ, ಎನ್‌ಸಿಆರ್ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ಎನ್.ಚೆನ್ನಯ್ಯ, ಪ್ರಾಂಶುಪಾಲ ಭವ್ಯಾ, ರೋಟೆರಿಯನ್ ಮುರಳಿಧರ್, ಲಕ್ಷ್ಮೀ ಗೋವಿಂದರಾಜು, ಸಂಜನಾ ಬುರ್ಲಿ ಇತರರು ಇದ್ದರು.