ಅರಕೇರಾ ತಾಲೂಕಿನ ಜಾಗೀರ ಜಾಡಲದಿನ್ನಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಶೋಭಾ, ಶಿಕ್ಷಕರಾದ ಅಶೋಕ ಸಜ್ಜನ್, ಡಿ.ಎನ್.ಮಹಾಂತೇಶ, ಎಂ.ಮಾರುತಿ, ಕಿರಣ ಕಾಂಬ್ಳೆ, ರವಿ ಮೆನ್ಫಾಡಿ, ವೆಂಕಟೇಶ ಕಾವಲಿ ಇತರರಿದ್ದರು. 
ಜಿಲ್ಲೆ

ಮಕ್ಕಳ ಭವಿಷ್ಯ ರೂಪಿಸುವುದು ಶಿಕ್ಷಕರ ಜವಾಬ್ದಾರಿ

ಅರಕೇರಾ: ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ವಿಶೇಷ ಸ್ಥಾನವಿದೆ. ಗುರುಗಳನ್ನು ಗೌರವಿಸುವುದು ಒಳ್ಳೆಯ ಸಂಸ್ಕೃತಿ ಎಂದು ಮುಖ್ಯಶಿಕ್ಷಕ ಬಂದಿಗಿ ಸಾಬ್ ಹೇಳಿದರು.

ತಾಲೂಕಿನ ಜಾಗೀರ ಜಾಡಲದಿನ್ನಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 2014-15 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಿಕ್ಷಕರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳ ಆಟ, ತುಂಟಾಟದ ಜತೆ ಓದಿನ ಕಡೆ ಕರೆದೊಯ್ದು ಭವಿಷ್ಯ ರೂಪಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.

ಶಿಕ್ಷಕ ಎಲ್.ಡಿ.ರವಿನಾಯ್ಕ ಮಾತನಾಡಿ, ವೃತ್ತಿಯಲ್ಲಿ ವ್ಯಕ್ತಿ ತನ್ನ ಸ್ಥಾನ ಮರೆತು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಕೆಲಸ ಸಾರ್ಥಕವಾಗುತ್ತದೆ. ಶಿಕ್ಷಕರು ಕಲಿಸುವ ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿಯಾಗಿವೆ ಎಂದರು.

ಹಳೇ ವಿದ್ಯಾರ್ಥಿ ಬಸವಲಿಂಗಯ್ಯ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲೆಯಿಂದಲೇ ಭವಿಷ್ಯ ರೂಪುಗೊಳ್ಳುತ್ತದೆ. ಶಿಕ್ಷಕರ ನಿಸ್ವಾರ್ಥ ಸೇವೆಯಿಂದ ಪ್ರತಿಯೊಬ್ಬರೂ ನಮ್ಮ ದಾರಿ ಕಂಡುಕೊಂಡಿದ್ದೇವೆ. ಬದುಕಿಗೆ ಬೆಳಕಾದ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದರು.