ಚಿಕ್ಕನಾಯಕನಹಳ್ಳಿ: ಶಿಕ್ಷಕರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದು, ತಮ್ಮ ವ್ಯಕ್ತಿತ್ವದೊಂದಿಗೆ ವಿದ್ಯಾರ್ಥಿಗಳನ್ನು ಬೆಳೆಸುತ್ತಾ ದೇಶದ ಭವಿಷ್ಯ ಉಜ್ವಲಗೊಳಿಸುವ ಕೆಲಸ ಶಿಕ್ಷಕರಿಂದ ಆಗಬೇಕಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಶಿಕ್ಷಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ನೌಕರರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿ, ಒಂದು ಸಮಾಜ, ಊರನ್ನು ಬದಲಾಯಿಸುವ ಶಕ್ತಿ ಶಿಕ್ಷಕರಲ್ಲಿರುತ್ತದೆ. ಈಗಾಗಲೇ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ನುರಿತ ಶಿಕ್ಷಕರಿಂದ ಪ್ರೇರಣಾ ಶಿಬಿರಗಳನ್ನು ಮಾಡಲಾಗುತ್ತಿದ್ದು, ಇದರೊಂದಿಗೆ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ, ನೀಟ್ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ತಾಲೂಕಿನಲ್ಲಿ ಮಾದರಿ ಶಾಲೆಗಳನ್ನು ಪ್ರಾರಂಭಿಸಲು ಈಗಾಗಲೇ ಅಧ್ಯಯನ ನಡೆಸಿದ್ದು, ಅದರಂತೆ ಎಲ್ಕೆಜಿಯಿಂದ ಪಿಯು ವರೆಗೆ ಎಲ್ಲ ರೀತಿಯ ಶೈಕ್ಷಣಿಕ ತರಬೇತಿಯನ್ನೊಳಗೊಂಡ ಶಾಲೆಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಅದೇಶ ಬಂದ ನಂತರ ಮಾಡಲಾಗುವುದು ಎಂದರು.
ನಿವೃತ್ತ ಪ್ರಾಂಶುಪಾಲ ಹರಟೆ ಖ್ಯಾತಿಯ ಪ್ರೊ.ಕೃಷ್ಣೇಗೌಡ ಮಾತನಾಡಿ, ಈ ನಾಡು ಕಂಡ ಶ್ರೇಷ್ಠ ಶಿಕ್ಷಕರಲ್ಲಿ ತೀನಂ ಶ್ರೀಕಂಠಯ್ಯ ಒಬ್ಬರು. ಅವರು ಹುಟ್ಟಿದ ಈ ಕ್ಷೇತ್ರ ನನಗೆ ತೀರ್ಥಕ್ಷೇತ್ರವಾಗಿದೆ. ಪ್ರಮಾಣ ಪತ್ರವನ್ನು ಪಡೆದ ತಕ್ಷಣವೇ ಪ್ರತಿಯೊಬ್ಬರು ಶಿಕ್ಷಕರಾಗುತ್ತಾರೆ. ಅದರೆ ಅವರು, ಗುರುವಾಗುವುದು ಉತ್ತಮ ವಿದ್ಯಾರ್ಥಿಯನ್ನು ಸಿದ್ಧಪಡಿಸಿದಾಗ ಮಾತ್ರ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮನಮಹೋನ್ ಮಾತನಾಡಿದರು. ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಸಂಘದ ಪದಾಧಿಕಾರಿಗಳಾದ ವೆಂಕಟರಮಣಯ್ಯ, ಸುರೇಶ್, ಗಂಗಾಧರ್, ಶಿವಣ್ಣ, ಮಂಜುನಾಥ್ ಇತರರು ಇದ್ದರು.