ಚನ್ನರಾಯಪಟ್ಟಣ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾವಂತರಾಗುವುದರ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿತು ಆಚಾರವಂತರಾಗುವ ಅವಶ್ಯಕತೆ ಇದೆ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಹಾಸನ ಮತ್ತು ಕೊಡಗು ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆಯ ಬಿಜಿಎಸ್ ವೈಭವ- 2025 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಸಂಸ್ಕಾರ ಕಲಿಸುವ ಜವಾಬ್ದಾರಿ ಪಾಲಕರು ಮೇಲಿದೆ. ಪಾಲಕರು ಮಗುವಿನ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಿಂದ ಮನೆಯಲ್ಲಿ ಸೌಹಾರ್ದ ವಾತಾವರಣವಿರುವಂತೆ ನೋಡಿಕೊಳ್ಳಬೇಕು. ಉತ್ತಮ ವಾತಾವರಣದಲ್ಲಿ ಬೆಳೆಯುವ ಮಗು ಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದರು.
ಮಕ್ಕಳಲ್ಲಿ ಜ್ಞಾನವೆಂಬ ಶಕ್ತಿ ಹೊರ ಹೊಮ್ಮಬೇಕಾದರೆ ಪಾಲಕರು ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು. ಅವರು ಬದುಕಿನಲ್ಲಿ ಏನಾಗಬೇಕು ಎಂಬುದನ್ನು ಬಾಲ್ಯದಲ್ಲೇ ನಿರ್ಧರಿಸಬೇಕು. ಮುಂದಿನ ಜೀವನದ ಬಗ್ಗೆ ಸ್ಪಷ್ಟವಾದ ಗುರಿ ಇಟ್ಟುಕೊಳ್ಳುವುದರ ಜತೆಗೆ ಅದಕ್ಕೆ ಪೂರಕವಾಗಿ ಮುಂದುವರಿಯಬೇಕು ಎಂದು ತಿಳಿಸಿದರು.
ಖ್ಯಾತ ವಾಗ್ಮಿ, ಸಾಹಿತಿ ಸುಧಾ ಬರಗೂರು ಮಾತನಾಡಿ, ದೇಶದ ನಿಜವಾದ ಸಂಪತ್ತು ಮಕ್ಕಳು. ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ದೊಡ್ಡದು. ಪಾಲಕರು ಮಕ್ಕಳ ಬೆಳವಣಿಗೆ ಕಡೆಗೆ ವಿಶೇಷ ಕಾಳಜಿ ವಹಿಸಬೇಕು. ಸಮಾಜ ಮಕ್ಕಳ ಭಾವನೆ, ಹಕ್ಕುಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪಾಲಕ ವರ್ಗ ಶ್ರಮಿಸಬೇಕು ಎಂದರು.
ಚನ್ನರಾಯಪಟ್ಟಣ ಸಾಂಸ್ಕೃತಿಕ ನೆಲೆವೀಡಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧಬಿದ್ದು, ಇಂದಿನ ಮಕ್ಕಳನ್ನು ಆಧುನಿಕ ಸಮೂಹ ಮಾಧ್ಯಮಗಳಿಂದ ಹೊರತಂದು ಸಾಹಿತ್ಯ, ಕಲೆ, ಸಂಸ್ಕೃತಿಗೆ ಪ್ರೇರೆಪಿಸುವುದರ ಜತೆಗೆ ಪ್ರತಿ ಕುಟುಂಬದಲ್ಲಿ ಕನ್ನಡ ಉಳಿಸುವ ಜವಾಬ್ದಾರಿಯನ್ನು ಹೆಣ್ಣು ಮಕ್ಕಳು ಹೊರಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಮಾತನಾಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೈಲಾಸನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಪ್ರಶಾಂತ್ ಕಾಳೇಗೌಡ, ಹಿರಿಯ ಪತ್ರಕರ್ತ ಎಚ್.ಬಿ.ಮದನ್‌ಗೌಡ, ಪ್ರಾಂಶುಪಾಲರಾದ ಡಾ.ಮಂಜುನಾಥ್, ಸಿ.ಸಿ.ಕುಮಾರ್, ಶಂಕರೇಗೌಡ, ಬಿಜಿಎಸ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಮಧುಸೂದನ್ ಇತರರಿದ್ದರು.