ಜಿಲ್ಲೆ

ಶಕ್ತಿ ಯೋಜನೆ ವ್ಯಂಗ್ಯ ಮಾಡುವವರು ಮನುವಾದಿಗಳು

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಜಾರಿಗೊಳಿಸಿರುವ ಶಕ್ತಿ ಯೋಜನೆಯನ್ನು ವ್ಯಂಗ್ಯ ಮಾಡುತ್ತಿರುವವರು ಮನುವಾದಿಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಕ್ರಮವನ್ನು ರಾಜ್ಯದಾದ್ಯಂತ ಮಹಿಳೆಯರು ಸ್ವಾಗತಿಸುತ್ತಿರುವುದು ಕಣ್ಣಿಗೆ ಕಾಣಿಸುತ್ತಿದ್ದರೂ ವ್ಯಂಗ್ಯ ಮಾಡುವವರಿಗೆ ಏನು ಹೇಳುವುದು ಎಂದು ಟೀಕಿಸಿದರು.

ಶಕ್ತಿ ಯೋಜನೆ ಇಡೀ ರಾಷ್ಟ್ರದಲ್ಲಿ ಮೊದಲ ಬಾರಿ ಅನುಷ್ಠಾನಕ್ಕೆ ಬಂದಿದ್ದು, ತೀವ್ರ ಸಂಚಲನ ಉಂಟು ಮಾಡಿದೆ. ಇದಕ್ಕೆ ವಾರ್ಷಿಕವಾಗಿ 4,050 ಕೋಟಿ ರೂ. ವೆಚ್ಚವಾಗಲಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ ಎಂದರು.

ಈ ಯೋಜನೆ ಜಾರಿ ಮಾಡುವ ಮೂಲಕ ನಾವು ಗ್ಯಾರಂಟಿ ಕುಳ ಎಂಬುದನ್ನು ಸಾಬೀತು ಮಾಡಿದ್ದೇವೆ. ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಣ ಉಳಿತಾಯ ಆಗುತ್ತಿರುವುದಕ್ಕೆ ಧನ್ಯವಾದ ಹೇಳುತ್ತಿರುವುದು ಕಂಡುಬಂದಿದೆ ಎಂದರು.

ಎಷ್ಟೋ ಮಹಿಳೆಯರು ಪ್ರವಾಸಕ್ಕೆ ಹೋಗಿಯೇ ಇರುವುದಿಲ್ಲ. ಸುತ್ತಾಡದಿದ್ದರೆ ಹೇಗೆ? ಲೋಕಜ್ಞಾನ, ಬುದ್ಧಿವಂತಿಕೆ ಬರುತ್ತದೆ. ಅವರೂ ಆಗಾಗ್ಗೆ ಪ್ರವಾಸ ಕೈಗೊಳ್ಳಬೇಕು. ಅದಕ್ಕಾಗಿ ಮುಕ್ತ ಅವಕಾಶ ಮಾಡಿಕೊಟ್ಟಿದ್ದೇವೆ. ಇದನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.