ರಾಯಚೂರಿನ ಗಿರಿ ಅಭಯ ಆಂಜಿನೇಯ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಜಾನಪದ ಗೀತ ಗಾಯನ ಕಾರ್ಯಕ್ರಮವನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಬಸವರಾಜ ಉದ್ಘಾಟಿಸಿದರು. ಮುಖಂಡರಾದ ಷಣ್ಮುಖಪ್ಪ ವಲ್ಕಂದಿನ್ನಿ, ಬಂಡೇಶ ವಲ್ಕಂದಿನ್ನಿ, ಕೆ.ವೇಣುಗೋಪಾಲ, ನರಸಯ್ಯ ಬುಡದಿನ್ನಿ, ಪ್ರತಿಭಾ ಗೋನಾಳ, ರಾಮಣ್ಣ, ಎಂ.ನಾಗರೆಡ್ಡಿ ಇದ್ದರು. 
ಜಿಲ್ಲೆ

ಜಾನಪದ ಸಾಹಿತ್ಯ ಉಳಿಸುವುದು ನಮ್ಮೆಲ್ಲರ ಕರ್ತವ್ಯ

ರಾಯಚೂರು: ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಜಾನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇಂದಿನ ಪೀಳಿಗೆಗೆ ಜಾನಪದ ಸಾಹಿತ್ಯದ ಪರಿಚಯ ಮಾಡಿಕೊಡಬೇಕಾಗಿದೆ ಎಂದು ಗಿರಿ ಅಭಯ ಆಂಜಿನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಬಸವರಾಜ ಹೇಳಿದರು.
ಸ್ಥಳೀಯ ಗಿರಿ ಅಭಯ ಆಂಜಿನೇಯ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಜಾನಪದ ಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಸಾಹಿತ್ಯ ಜನಸಾಮಾನ್ಯರಿಂದ ಅದರಲ್ಲೂ ಗ್ರಾಮೀಣ ಪ್ರದೇಶ ಮಹಿಳೆಯರಿಂದ ಬೆಳೆದು ಬಂದಿರುವ ಸಾಹಿತ್ಯವಾಗಿದೆ ಎಂದರು.
ನಮ್ಮ ಹಿರಿಯರು ಶುಭ ಸಂದರ್ಭ ಹಾಗೂ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾಗ ಜಾನಪದ ಗೀತೆಗಳನ್ನು ಹಾಡುವ ಮೂಲಕ ಮನೋಲ್ಲಾಸ ಪಡೆಯುತ್ತಿದ್ದರು. ಅಂತಹ ಸಾಹಿತ್ಯವನ್ನು ಸಂಗ್ರಹಿಸಿ ಜನರಿಗೆ ಮುಟ್ಟಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಂಡಪ್ಪ ಬಿರಾದರ ಮಾತನಡಿ, ಜನಪದ ಸಾಹಿತ್ಯ ಎಲ್ಲ ಸಾಹಿತ್ಯ ಪ್ರಕಾರಗಳ ತಾಯಿ ಬೇರಾಗಿದ್ದು, ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜನಪದ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ಟಿವಿ ಮತ್ತು ಸಾಮಾಜಿಕ ಜಾಲತಾಣಗಳಿಂದಾಗಿ ಜನಪದ ಸಾಹಿತ್ಯದ ಬಗ್ಗೆ ಯುವಜನರಲ್ಲಿ ಒಲವು ಕಡಿಮೆಯಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಖ್ಯಾತ ಗಾಯಕ ಶರಣಪ್ಪ ಗೋನಾಳರಿಂದ ಜಾನಪದ ಗೀತ ಗಾಯನ ಜರುಗಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಷಣ್ಮುಖಪ್ಪ ವಲ್ಕಂದಿನ್ನಿ, ಬಂಡೇಶ ವಲ್ಕಂದಿನ್ನಿ, ಕೆ.ವೇಣುಗೋಪಾಲ, ನರಸಯ್ಯ ಬುಡದಿನ್ನಿ, ಪ್ರತಿಭಾ ಗೋನಾಳ, ರಾಮಣ್ಣ, ಎಂ.ನಾಗರೆಡ್ಡಿ ಉಪಸ್ಥಿತರಿದ್ದರು.