ಮೈಸೂರು: ಪ್ರತಿ ಬಜೆಟ್‌ನಲ್ಲೂ ಕೇಂದ್ರ ಸರ್ಕಾರ ಕೆಲವು ಹೊಸ ಹೊಸ ಸಂಸ್ಕೃತ ಪದಗಳನ್ನು ಜನರಿಗೆ ಪರಿಚಯಿಸುತ್ತಿದ್ದರು. ಆದರೆ ಈ ಬಾರಿ ಹೊಸದಾಗಿ ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರು ಎಂದು ಹೇಳುತ್ತಿದ್ದು, ಈ ಪದಗಳನ್ನು ಕೇಳಿದ್ದೇ ಜನರ ಭಾಗ್ಯ ಎನ್ನುವಂತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.
ಕಳೆದ 10 ವರ್ಷಗಳ ಕೇಂದ್ರದ ಬಜೆಟ್‌ಅನ್ನು ಅವಲೋಕಿಸಿದಾಗ ಇವರು ಕೇವಲ ಯೋಜನೆಗಳನ್ನು ಘೋಷಣೆ ಮಾಡುತ್ತಾರೆಯೇ ವಿನಃ ಅವುಗಳನ್ನು ಕಾರ್ಯರೂಪಕ್ಕೆ ತಂದು ಜನರ ಬದುಕಿಗೆ ಸಹಾಯ ಮಾಡಿದ್ದು ತುಂಬಾ ಕಡಿಮೆ. ಹೀಗಾಗಿ ಈ ಚುನಾವಣಾ ಬಜೆಟ್ ಕೂಡಾ ನುಡಿದಂತೆ ನಡೆಯದ ಇವರ ಈ ಹಿಂದಿನ ಬಜೆಟ್ ಸಾಲಿಗೆ ಸೇರುತ್ತದೆ ಅಷ್ಟೇ ಎಂದು ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಆಡಳಿತ ಅವಧಿಯ ಉದ್ದಕ್ಕೂ ಕೇವಲ ಕಾರ್ಪೋರೇಟ್ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಇದೀಗ ಚುನಾವಣೆಯ ಉದ್ದೇಶದಿಂದ ಹಲವು ಯೋಜನೆಗಳನ್ನು ಈ ಹಿಂದಿನ ಬಜೆಟ್‌ನಂತೆಯೇ ಘೋಷಿಸಿದ್ದು ಇವುಗಳೂ ಕೂಡಾ ಹಿಂದೆ ಪ್ರಧಾನಿಗಳು ಘೋಷಿಸಿದ 20 ಲಕ್ಷ ಕೋಟಿ ಕರೋನಾ ಪ್ಯಾಕೇಜ್ ರೀತಿಯ ಸುಳ್ಳುಗಳ ಸರಮಾಲೆಯೇ ಆಗಿದೆ ಎಂದು ಟೀಕಿಸಿದ್ದಾರೆ.