ಮೈಸೂರು: ಸಿನಿಮಾ, ರಾಜಕೀಯದಲ್ಲಿ ತಂದೆ-ಮಕ್ಕಳು ಬರುವುದು ಸಹಜ. ಆದರೆ ನೊಬೆಲ್ ಪಾರಿತೋಷಕ ಪಡೆಯುವುದು ಅಪರೂಪದಲ್ಲಿ ಅಪರೂಪದ ಸಾಧನೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಐನ್‌ಸ್ಟಿನ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮ್ ಅವರು ರಚಿತ ನೊಬೆಲ್ ಪಾರಿತೋಷಕ ಪುರಸ್ಕೃತ ತಂದೆ-ಮಕ್ಕಳ ಜೋಡಿಗಳು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಪ್ರೊ.ಪಿ.ವೆಂಕಟರಾಮಯ್ಯ ಅವರು ರಚಿಸಿರುವ ಕೃತಿಯು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. 124 ಪುಟ ಹೊಂದಿರುವ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು. ನಮ್ಮಲ್ಲಿ ರಾಜಕೀಯ, ಸಿನಿಮಾಗಳಲ್ಲಿ ತಂದೆ-ಮಕ್ಕಳ ಬರುತ್ತಾರೆ ಅಷ್ಟೇ. ತಂದೆ-ಮಕ್ಕಳು ನೊಬೆಲ್ ಪ್ರಶಸ್ತಿಗೆ ಭಾಜನರಾಗುವುದು ಎಂದರೆ ಸುಲಭದ ವಿಷಯವಲ್ಲ ಎಂದರು.
ನೊಬೆಲ್ ಪುರಸ್ಕಾರ ಎನ್ನುವುದು ಬಹುದೊಡ್ಡ ಸಾಧನೆ ಮಾಡಿದವರಿಗೆ ಸಲ್ಲುವಂತದ್ದಾಗಿದೆ. ಅದಕ್ಕೆ ಸಾಕಷ್ಟು ಸಾಧನೆ ಅಗತ್ಯ. ಅಂಥ ಸಾಧನೆ ಮಾಡಲು ಸಾಕಷ್ಟು ಜನರು ಶ್ರಮಿಸುತ್ತಿದ್ದಾರೆ. ಒಬ್ಬರು ಪಡೆಯುವುದೇ ಸಾಕಷ್ಟು ಶ್ರಮ ವಹಿಸಬೇಕಾದ ದಿನಗಳಲ್ಲಿ ತಂದೆ ಹಾಗೂ ಮಗ ಇಬ್ಬರೂ ನೊಬೆಲ್ ಪುರಸ್ಕಾರಕ್ಕೆ ಪಾತ್ರವಾಗಿರುವುದು ನಿಜವಾದ ಸಾಧನೆ ಎಂದು ಬಣ್ಣಿಸಿದರು.
ಭಾರತಕ್ಕೆ ನೊಬೆಲ್ ಪಾರಿತೋಷಕ ಬಂದು ಸುಮಾರು ನೂರು ವರ್ಷಗಳ ಹತ್ತಿರವಾಗುತ್ತಿದೆ. ಹಾಗಾಗಿ ನೊಬೆಲ್ ಪ್ರಶಸ್ತಿ ಪಡೆಯಲು ನಮ್ಮಲ್ಲಿಯೂ ಹೆಚ್ಚಿನ ಅಧ್ಯಯನ ಮತ್ತು ಬುದ್ಧಿಮತ್ತೆ ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರೋತ್ಸಾಹ ಬೇಕು ಎಂದು ಹೇಳಿದರು.
ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳು ಕಡಿಮೆ. ಇಂಗ್ಲಿಷ್‌ನಲ್ಲಿ ವಿಜ್ಞಾನ ಓದಿ, ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ಕಷ್ಟದ ಕೆಲಸ. ಇಂತಹ ಕಾರ್ಯವನ್ನು ಮಾಡಿ ಹೆಚ್ಚೆಚ್ಚು ವಿಜ್ಞಾನದ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಬಂದರೆ ಹೆಚ್ಚು ಕನ್ನಡಿಗರಿಗೆ ತಲುಪುತ್ತದೆ ಎಂದರು.
ನಾನೂ ಇಬ್ಬರು ನೊಬೆಲ್ ಪ್ರಶಸ್ತಿ ಪುರಸ್ಕೃತರೊಂದಿಗೆ ಕೆಲಸ ಮಾಡಿದ್ದ ಹೆಮ್ಮೆ ಇದೆ. ಜಪಾನ್‌ನ ಒಬ್ಬರು ಮತ್ತು ವೆಂಕಿ ರಾಮಕೃಷ್ಣನ್ ಅವರ ಪ್ರಯೋಗಾಲಯದಲ್ಲಿ 2007ರಲ್ಲಿ ಅಭ್ಯಾಸ ಮಾಡಿದ್ದೇನೆ. ವೆಂಕಿ ರಾಮಕೃಷ್ಣನ್ ಅವರಿಗೆ 2010ರಲ್ಲಿ ನೊಬೆಲ್ ಪ್ರಶಸ್ತಿ ಬಂತು. ಆ ನಂತರ ಎಲ್ಲ ಕಡೆ ಉಪನ್ಯಾಸ ನೀಡಿ ತಮ್ಮ ಜ್ಞಾನವನ್ನು ಹರಡಿದರು ಎಂದರು.
ನೊಬೆಲ್ ಪ್ರಶಸ್ತಿ ಗಳಿಸಿದ ವಿಜ್ಞಾನಿಗಳು ಪ್ರಶಸ್ತಿಗಿಂತ ಹೆಚ್ಚಿನ ಕೆಲಸ ಮಾಡಿರುತ್ತಾರೆ. ಹೀಗಾಗಿ ಅವರಿಗೆ ಪ್ರಶಸ್ತಿ ಮೇಲೆ ಹೆಚ್ಚು ಆಸಕ್ತಿ ಇರುವುದಿಲ್ಲ. ತಮ್ಮ ಕೆಲಸದ ಬಗ್ಗೆ ಮಾತ್ರ ಅವರಿಗೆ ಗಮನ ಕೇಂದ್ರೀಕೃತಗೊಂಡಿರುತ್ತದೆ ಎಂದು ಹೇಳಿದರು.
ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಎನ್.ಪ್ರಸಾದ್ ಮಾತನಾಡಿ, ನೊಬೆಲ್ ಪ್ರಶಸ್ತಿ ಪಡೆದ ಅಪ್ಪ-ಮಕ್ಕಳು ಮಾತ್ರ ಬರೆಯಬಾರದು. ಇಡೀ ಕುಟುಂಬದ ಬಗ್ಗೆ ಬರೆಯುವ ಕೆಲಸವಾಗಬೇಕು. ಏಕೆಂದರೆ ಮೇರಿ ಕ್ಯೂರಿ ಇಡೀ ಕುಟುಂಬ ವಿಜ್ಞಾನಕ್ಕೆ ಕೊಡುಗೆ ನೀಡಿದೆ. ಭಾರತದಲ್ಲಿ ಸಿ.ವಿ.ರಾಮನ್, ಎಸ್.ಚಂದ್ರಶೇಖರ್ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಹೀಗಾಗಿ ಕುಟುಂಬಗಳನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಪುಸ್ತಕ ಬರಬೇಕು ಎಂದು ಕೋರಿದರು.
ಜೆ.ಜೆ.ಥಾಮ್ಸನ್-ಜಿ.ಪಿ.ಥಾಮ್ಸನ್, ಹೆನ್ರಿಬ್ರಾಗ್ ಮತ್ತು ಲಾರೆನ್ಸ್ ಬ್ರಾಗ್, ನೀಲ್ ಬೋರ್, ಪರಮಾಣು ರಚನೆ, ತುಂಬು ಸಂಸಾರ-ಆನಂದ ಸಾಗರ, ತತ್ವಜ್ಞಾನಿ ನೀಲ್ಸ್ ಬೋರ್, ಪಿಯರಿ ಕ್ಯೂರಿ, ಫ್ರೆಡ್ರಿಕ್ ಜೂಲಿಯೋ, ಕಾರ್ಲ ಮನ್ನೆ ಜಾರ್ಜ ಸೀಗ್ ಬಾನ್, ಆರ್ಥರ್ ಕೋರ್ನ್ ಬರ್ಗ್ ಮತ್ತು ರೋಜರ್ ಕೋರ್ನ್‌ಬರ್ಗ್, ಹ್ಯಾನ್ಸ್‌ವಾನ್ ಯೂಲರ್-ಚೆಲ್ಸಿನ್ ಕುರಿತು ಪುಸ್ತದಲ್ಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್.ರಾಮೇಗೌಡ, ಕೃತಿ ಕೃರ್ತ ಪ್ರೊ.ಪಿ.ವೆಂಕಟರಾಮಯ್ಯ, ಸಂವಹನ ಪ್ರಕಾಶನ ಲೋಕಪ್ಪ ಇತರರು ಇದ್ದರು.