ಜಿಲ್ಲೆ

ಕಲೆ, ಸಾಹಿತ್ಯ, ಸಂಗೀತದಿಂದ ಪ್ರಬುದ್ಧ ಮನಸ್ಸು ಪಡೆಯಲು ಸಾಧ್ಯ

ಮೈಸೂರು: ಅಂಕಗಳ ಆಧಾರದ ಮೇಲೆ ಉದ್ಯೋಗ ನೀಡುತ್ತಾರೆಯೇ ವಿನಾ ಪುಸ್ತಕ ಜ್ಞಾನ, ಪುಸ್ತಕಗಳ ಓದಿಗನುಗುಣವಾಗಿ ಯಾರೂ ಉದ್ಯೋಗ ನೀಡಲಾರರು. ಪ್ರಬುದ್ಧ ಮನಸ್ಸನ್ನು ಪಡೆಯಲು ಕಲೆ, ಸಾಹಿತ್ಯ, ಸಂಗೀತದ ಮೊರೆ ಹೋಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದರು.

ನಗರದ ಇಂಜಿನಿಯರ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ದಾಸೋಹದ ವತಿಯಿಂದ ಭಾನುವಾರ ಆಯೋಜಿಸಿದ್ದ ಹಿರಿಯ ಲೇಖಕಿ ಪದ್ಮಾ ಆನಂದ್ ವಿರಚಿತ ‘ತಂಗಾಳಿಯಲ್ಲಿ ವಾಕಿಂಗ್’ ಪ್ರಬಂಧಗಳ ಸಂಕಲನ ಮತ್ತು ‘ಬದುಕು ಬಿಂಬ’ ಕಥಾ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಯ ನಮಗಾಗಿ ಬರುವುದಿಲ.್ಲ ಹೊರತಾಗಿ ನಮಗಾಗಿ ನಾವೇ ಸಮಯವನ್ನು ರೂಪಿಸಿಕೊಳ್ಳಬೇಕು. ಇಂದು ಜನ ನೆಮ್ಮದಿಗಾಗಿ ಯಾವುದೋ ಮೂಲವನ್ನು ಹುಡುಕುತ್ತಾರೆ. ನೆಮ್ಮದಿಯನ್ನು ನಾವು ಹುಡುಕುವುದಲ್ಲ, ನೆಮ್ಮದಿಯೇ ನಮ್ಮನ್ನು ಹುಡುಕಿ ಬರುವಂತಹ ಬದುಕು ನಮ್ಮದಾಗಬೇಕು. ಬದುಕನ್ನು ನಾವು ಸುಂದರವಾಗಿರಿಸಿಕೊಳ್ಳಬೇಕೆಂದಿಲ್ಲ, ಉತ್ತಮ ಹವ್ಯಾಸವಿದ್ದರೆ ಬದುಕೇ ನಮ್ಮನ್ನು ಸುಂದರವಾಗಿರಿಸುತ್ತದೆ ಎಂದು ತಿಳಿಸಿದರು.

ನಮ್ಮ ಮಿತಿಯಲ್ಲಿ ಸಾಹಿತ್ಯವನ್ನು ಅರಿತರಷ್ಟೇ ಸಾಹಿತ್ಯಕ್ಕೊಂದು ಗೌರವ. ಪ್ರಾತಿನಿಧಿಕ ಕಥೆಗಳನ್ನು ಓದಿ ಅಲ್ಲಿನ ವಸ್ತು, ಆಂತರ್ಯವನ್ನು ಅರಿಯಬೇಕು. ಉತ್ತಮ ಉದ್ದೇಶ ಹೊಂದಿದವನಿಗೆ ಸಮಸ್ಯೆಗಳು ನಗಣ್ಯ. ಕೆಲವರು ಬದುಕನ್ನು ದೂಡಲು ಔಷಧಗಳನ್ನು ಬಳಸುತ್ತಾರೆ. ಆದರೆ ಬದುಕನ್ನು ಸವಿಯಲು ಪುಸ್ತಕ ಖರೀದಿಸಿ ಓದಬೇಕು. ಪುಸ್ತಕವು ಮನಃಶಾಂತಿಯನ್ನು ತಂದುಕೊಡುವ ಏಕೈಕ ಅಸ್ತ್ರ. ಬಿದ್ದವನನ್ನು ಮೇಲೆಬ್ಬಿಸಿ, ಜ್ಞಾನದ ಮೂಲಕ ಬದುಕು ರೂಪಿಸುತ್ತದೆ. ಆದರೆ ಇಂದು ಪುಸ್ತಕ ಕೊಂಡುಕೊಳ್ಳಲು ಹಿಂದೆ ಮುಂದೆ ಯೋಚಿಸುತ್ತಾರೆ, ರಿಯಾಯಿತಿ ಇದೆಯೇ ಎಂದು ಕೇಳುವವರೇ ಹೆಚ್ಚು ಎಂದರು.

ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಸುತ್ತಲಿನ ಸಮಾಜವನ್ನು ಸಕಾರಾತ್ಮಕವಾಗಿ ಕಂಡು ಜ್ಞಾನದ ಬುತ್ತಿಯನ್ನು ಕಟ್ಟಿಕೊಡುವುದು ಸಾಹಿತ್ಯ. ವಿಮರ್ಶೆಯ ಹೆಸರಲ್ಲಿ ಸಾಹಿತ್ಯವನ್ನು ಹಿಗ್ಗಾಮುಗ್ಗಾ ಎಳೆದು ಬೇರೊಂದು ರೂಪಕ್ಕೆ ಇಂದು ವಿಮರ್ಶಕರು ತರುತ್ತಿದ್ದಾರೆ. ಸಾಹಿತ್ಯದ ನಿಜವಾದ ಸೌಂದರ್ಯವನ್ನು ಆರಾಧಿಸುವಂತಹ ಕಾರ್ಯಗಳಾಗಬೇಕು ಎಂದರು.

ಕನ್ನಡ ಪ್ರಾಧ್ಯಾಪಕ ಡಾ.ಮೈಸೂರು ಕೃಷ್ಣಮೂರ್ತಿ ಕೃತಿಗಳನ್ನು ಕುರಿತು ಮಾತನಾಡಿದರು. ಮೈಸೂರು ಸಾಹಿತ್ಯ ದಾಸೋಹದ ಸಂಸ್ಥಾಪಕಿ ಪದ್ಮಾ ಆನಂದ್, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎಸ್.ರಾಮಪ್ರಸಾದ್, ಶಿಕ್ಷಣ ಇಲಾಖೆಯ ಸಹಾಯಕ ಸಮಗ್ರ ಯೋಜನಾಧಿಕಾರಿ ಜಿ.ವೆಂಕಟಾಚಲ, ಚುಕ್ಕೆ ಚಿತ್ರ ಕಲಾವಿದ ಮೋಹನ್ ವೆರ್ಣೇಕರ್, ಲೇಖಕಿ ಕೆರೋಡಿ ಲೋಲಾಕ್ಷಿ, ರಂಗನಾಥ್, ಚಂದ್ರಶೇಖರ್ ಹಾಜರಿದ್ದರು.