ಚಿಕ್ಕಮಗಳೂರು: ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಕೊಡುಗೆ ಅಪಾರ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಕೆಆರ್‌ಎಸ್ ಆಸ್ಪತ್ರೆಯಲ್ಲಿ ನಗರಸಭೆಯಿಂದ ಪೌರಕಾರ್ಮಿಕರು, ನಗರಸಭೆ ವಾಹನ ಚಾಲಕರು ಹಾಗೂ ಯುಜಿಡಿ ಸಹಾಯಕರುಗಳಿಗೆ ಆಯೋಜಿಸಿದ್ದ ಸಮಗ್ರ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಆರೋಗ್ಯ ಬಹುಮುಖ್ಯ. ನಮ್ಮ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರದ ಸ್ವಚ್ಛತೆಯನ್ನ ಕಾಪಾಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ರಕ್ಷಿಸುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.
ಪ್ರತಿಯೊಬ್ಬ ಪೌರಕಾರ್ಮಿಕರು ಆರೋಗ್ಯವಾಗಿರಬೇಕು ಎಂಬ ದೃಷ್ಟಿಯಿಂದ ಪ್ರತಿವರ್ಷ ೨೪ ಲಕ್ಷ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ನಗರದ ಎಲ್ಲ ಪೌರಕಾರ್ಮಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಆರೋಗ್ಯವು ನಮ್ಮೆಲ್ಲರ ಬಹುಮುಖ ಸಂಪತ್ತು. ಪ್ರಸ್ತುತ ಜೀವನ ಕ್ರಮ ಹಾಗೂ ಆಹಾರ ಕ್ರಮದಲ್ಲಿನ ಬದಲಾವಣೆಗಳಿಂದ ಆರೋಗ್ಯದಲ್ಲಿ ಏರುಪೇರುಗಳು ಸಹಜವಾಗಿದೆ. ಉತ್ತಮ ಜೀವನ ಕ್ರಮವನ್ನು ಅನುಸರಿಸಿ ದೇಹಕ್ಕೆ ಅಗತ್ಯ ಆಹಾರ ಪದ್ಧತಿಯನ್ನು ರೂಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಪೌರಕಾರ್ಮಿಕರು ತಮ್ಮ ಕಾರ್ಯನಿಷ್ಠೆಯಿಂದ ಇಡೀ ನಗರದ ಆರೋಗ್ಯವನ್ನು ಕಾಪಾಡುವಲ್ಲಿ ಶ್ರಮವಹಿಸುತ್ತಿದ್ದಾರೆ. ಪೌರಕಾರ್ಮಿಕರು ಆರೋಗ್ಯ ತಪಾಸಣೆ ನಂತರ ವೈದ್ಯರ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ನಗರಸಭೆಯಲ್ಲಿರುವ ೨೦೦ಕ್ಕೂ ಹೆಚ್ಚಿನ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸುವ ಜೊತೆಗೆ ಎಲ್ಲ ಪೌರಕಾರ್ಮಿಕರಿಗೆ ವಿಮೆ ಸೌಲಭ್ಯವನ್ನು ಒದಗಿಸಿ ಕೊಡಲಾಗುತ್ತಿದೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರೆ ಪೌರಕಾರ್ಮಿಕರು ಆರೋಗ್ಯವಾಗಿರಬೇಕು. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಗರಸಭೆಯಿಂದ ಕೊಡಮಾಡುವ ಪೌರಕಾರ್ಮಿಕರ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಕುಟುಂಬವನ್ನು ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಆಸ್ಪತ್ರೆಯ ಮುಖ್ಯಸ್ಥ ಡಾ.ಯೋಗೀಶ್, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೇಶ್, ಜಿಪಂ ಮಾಜಿ ಸದಸ್ಯೆ ಕವಿತಾ ಲಿಂಗರಾಜು ಮತ್ತಿತರರಿದ್ದರು.