ಕೆ.ಆರ್.ನಗರ ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 79ನೇ ಸ್ವಾತಂತೋತ್ಸವದಲ್ಲಿ ಶಾಲೆಗೆ ಕೊಡುಗೆ ನೀಡಿದ ದಾನಿಗಳಾದ ಮೂಳೆ ತಜ್ಞ ಡಾ.ಗೌತಮ್, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರಂಜಿತ್ ಹೊರೋ, ವ್ಯವಸ್ಥಾಪಕ ಕೆ.ವಿರೇಶ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಶೋಕ್, ಲತಾ, ಉದಯಗೌಡ, ಜೆ.ಮಹದೇವ್, ಜಿ.ಸೋಮೇಸಿ, ಇ.ಆರ್.ರತ್ನಮ್ಮ. ಸಿ.ಎನ್.ಮಂಜುನಾಥ್, ಬಿ.ಗೀತಾ, ಕೆ.ಸಿ.ಚಂದ್ರಶೇಖರ್ ಇತರರು ಇದ್ದರು. 
ಜಿಲ್ಲೆ

ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ

ಲೋಕೇಶ್ ಮನು. ಡಿ

ಕೆ.ಆರ್.ನಗರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮೂಳೆತಜ್ಞ ಡಾ.ಕೆ.ಆರ್.ಗೌತಮ್ ಹೇಳಿದರು.

ಪಟ್ಟಣದ ಆಂಜನೇಯ ಬಡವಾಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಹನೀಯರು ಹೋರಾಟ ಮಾಡಿದ್ದರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಾಗಿದೆ. ನಾವು ಇಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಅಗತ್ಯವಿಲ್ಲ. ಅವರ ತ್ಯಾಗ, ಬಲಿದಾನ ಅರ್ಥ ಮಾಡಿಕೊಂಡು ಪ್ರಾಮಾಣಿಕತೆಯಿಂದ ದೇಶದ ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ ಎಂದರು.

ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಜೀವನ, ತನು, ಮನ, ಧನವನೆಲ್ಲ ತ್ಯಾಗ ಮಾಡುವ ಮೂಲಕ ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟವರನ್ನು ನೆನೆಯಬೇಕು. ದೇಶ ನಮಗೇನು ನೀಡಿದೆ ಎನ್ನುವ ಬದಲು ದೇಶಕ್ಕಾಗಿ ನಾವು ಏನು ಮಾತ್ರ ಮಾಡಿದ್ದೇವೆ ಎಂಬುದು ಮುಖ್ಯ ಎಂದರು.

ಈ ಸಂದರ್ಭದಲ್ಲಿ ಶಾಲೆಗೆ ಡಾ.ಕೆ.ಆರ್.ಗೌತಮ್ ಎಲ್‌ಇಡಿ ಟಿವಿ ಕೊಡುಗೆಯಾಗಿ ನೀಡಿದರು. ಕೆನರಾ ಬ್ಯಾಂಕ್ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಎಸ್‌ಸಿ, ಎಸ್‌ಟಿ ಬಾಲಕಿಯರಿಗೆ 8.9 ಮತ್ತು 10ನೇ ತರಗತಿಯ ಮೂವರು ಟಾಪರ್ಸ್‌ಗೆ ತಲಾ 5 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಯಿತು.

ಕಾರ್ಯಕ್ರಮವನ್ನು ಕುರಿತು ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರಂಜಿತ್ ಹೊರೋ, ರೋಟರಿ ಕ್ಲಬ್ ಸದಸ್ಯ ಅಶೋಕ್, ಮುಖ್ಯಶಿಕ್ಷಕಿ ಲತಾ, ಶಿಕ್ಷಕರಾದ ಉದಯಗೌಡ, ಜೆ.ಮಹದೇವ್ ಮಾತನಾಡಿದರು. ದಾನಿಗಳಾದ ಮೂಳೆ ತಜ್ಞ ಡಾ.ಗೌತಮ್, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರಂಜಿತ್ ಹೊರೋ, ವ್ಯವಸ್ಥಾಪಕ ಕೆ.ವಿರೇಶ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಕಳೆದ ಸಾಲೀನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಮುಖಂಡ ಕೃಷ್ಣಭಟ್, ಶಿಕ್ಷಕರಾದ ಜಿ.ಸೋಮೇಸಿ, ಇ.ಆರ್.ರತ್ನಮ್ಮ, ಸಿ.ಎನ್.ಮಂಜುನಾಥ್, ಬಿ.ಗೀತಾ, ಕೆ.ಸಿ.ಚಂದ್ರಶೇಖರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.