ಜಿಲ್ಲೆ

ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ: ಬಿಜೆಪಿ ಟಿಕೆಟ್ ಘೋಷಿತ ಅಭ್ಯರ್ಥಿ ಈ.ಸಿ.ನಿಂಗರಾಜ್‌ಗೌಡ ಸ್ಪಷ್ಟನೆ

ಮೈಸೂರು: ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಕಣದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಈ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಿತ ಅಭ್ಯರ್ಥಿ ಈ.ಸಿ.ನಿಂಗರಾಜ್‌ಗೌಡ ಸ್ಪಷ್ಟಪಡಿಸಿದರು.


ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 16ರಂದು ಗುರುವಾರ ಬೆಳಗ್ಗೆ 11ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲ ಬೇಡ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕರು ನಾಮಪತ್ರ ಸಲ್ಲಿಕೆ ಸಂದರ್ಭ ಇರಲಿದ್ದಾರೆ ಎಂದರು

.
‘ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ’ ಎಂಬ ವಿಚಾರದಲ್ಲಿ ಜೆಡಿಎಸ್ ನಾಯಕರು ಗೊಂದಲ ಸೃಷ್ಟಿಸುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.


ಬಿಜೆಪಿಯಲ್ಲಿ ಒಮ್ಮೆ ಅಭ್ಯರ್ಥಿ ಘೋಷಣೆಯಾದ ಬಳಿಕ ಬದಲಾಯಿಸಿರುವ ಪ್ರಸಂಗ ಈವರೆಗೂ ನಡೆದಿಲ್ಲ. ಹೀಗಾಗಿ ಟಿಕೆಟ್ ವಿಚಾರದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುವುದು ಜೆಡಿಎಸ್-ಬಿಜೆಪಿ ಮೈತ್ರಿಗೆ ಧಕ್ಕೆ ಬರಲಿದೆ. ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದಾಗ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ ಎಂದು ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ನೀಡಿ ನ್ಯಾಯ ಕಲ್ಪಿಸಲಾಗಿದೆ. ಈಗ ಬದಲಾವಣೆ ಮಾಡುವುದರಿಂದ ಸಮುದಾಯದಲ್ಲಿ ಪ್ರಶ್ನೆಗಳು ಉದ್ಭವವಾಗಲಿವೆ ಎಂದರು.


ಸ್ಥಳೀಯ ನಾಯಕರು ರೈತ ಕುಟುಂಬದ ಒಕ್ಕಲಿಗನಾದ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ಶ್ರಮಿಸಿದ್ದೇವೆ. ಟಿಕೆಟ್ ಘೋಷಣೆಯಾದ ಮೇಲೆ ವಿನಾ ಕಾರಣ ಅಭ್ಯರ್ಥಿ ಬದಲಾಯಿಸುವುದರಿಂದ ಜೆಡಿಎಸ್‌ಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.


ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿಯಾಗಿ ನನಗೆ ಅವಕಾಶ ಮಾಡಿಕೊಡಬೇಕು. ಗೊಂದಲ ಸೃಷ್ಟಿಸುವ ಹೇಳಿಕೆ ನೀಡುವ ಜೆಡಿಎಸ್ ನಾಯಕರಿಗೆ ಸೂಚನೆ ನೀಡಿ ನನಗೆ ಬೆಂಬಲ ನೀಡುವಂತೆ ತಿಳಿಸಬೇಕು ಎಂದು ಕೋರಿದರು.