ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕೆಂಚಪ್ಪ ಲೇಔಟ್‌ನ ಚಂದ್ರಶೇಖರನ್ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ವಿಜಯಕುಮಾರ್ ಇದ್ದರು. 
ಜಿಲ್ಲೆ

ಚಂದ್ರಶೇಖರನ್ ಆತ್ಮಹತ್ಯೆ ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಅವರ ಸಾವಿಗೆ ನ್ಯಾಯ ಕೊಡಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಬುಧವಾರ ಚಂದ್ರಶೇಖರನ್ ಪತ್ನಿ ಕವಿತಾ ಅವರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳುವಂತೆ ಸಿಎಂ ಸಿದ್ದರಾಮಯ್ಯ ಅವರೇ ತನಗೆ ಸೂಚನೆ ನೀಡಿದ್ದರು. ಉಸ್ತುವಾರಿ ಸಚಿವರಾಗಿ ನನ್ನ ಜವಾಬ್ದಾರಿ ಕೂಡ ಇದ್ದು ಚಂದ್ರಶೇಖರನ್ ಕುಟುಂಬಕ್ಕೆ ಸರ್ಕಾರ ಮತ್ತು ವೈಯಕ್ತಿಕವಾಗಿ ಸಹಾಯ, ಸಹಕಾರ ನೀಡಲಾಗುವುದು ಎಂದರು.
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿರುವುದು ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಆ ಬಗ್ಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಈ ವಿಚಾರವನ್ನು ಕೆಲವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆ. ಅಚಾತುರ್ಯ ಆಗಿರುವುದು ನಿಜ. ಹಾಗಾಗಿ ಚಂದ್ರಶೇಖರನ್ ಕುಟುಂಬಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ಕಾನೂನುಬದ್ಧವಾಗಿ ತನಿಖೆ ಆಗಲಿದ್ದು ತಪ್ಪು ಮಾಡಿದವರು ಯಾರೇ ಆಗಿದ್ದರೂ ಕ್ರಮ ಆಗಲಿದೆ ಎಂದು ಹೇಳಿದರು. ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ವಿಜಯಕುಮಾರ್, ಜಿ.ಡಿ.ಮಂಜುನಾಥ ಮತ್ತಿತರರಿದ್ದರು.