ಶಿವಮೊಗ್ಗ: ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಯಾವುದೇ ಅಸಮಾಧಾನ ಇದ್ದರೂ ಕುಳಿತು ಮಾತನಾಡಬಹುದು ಎಂದು ಶಾಸಕ ಆರಗ ಜ್ಞಾನೇಂದ್ರ ಭೀನ್ನಮತೀಯರಿಗೆ ಮನವಿ ಮಾಡಿದರು.
ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳ ಬಗ್ಗೆ ಶನಿವಾರ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಇತ್ತೀಚಿನ ಬೆಳವಣಿಗೆಗಳಿಂದ ಕಾರ್ಯಕರ್ತರು ನಿಜಕ್ಕೂ ತುಂಬಾ ನೊಂದಿದ್ದಾರೆ. ಪಕ್ಷದ ಇಂದಿನ ಬೆಳವಣಿಗೆ ಬಹಳಷ್ಟು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಆದರೆ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.
ನಮ್ಮದು ನಾಯಕತ್ವ ಆಧಾರಿತ ಪಕ್ಷವಲ್ಲ. ಬದಲಿಗೆ ಕಾರ್ಯಕರ್ತರಿಂದ ಕೂಡಿದ ಪಕ್ಷವಾಗಿದೆ. ಆದರೆ ಪ್ರತಿ ದಿನವೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಪಕ್ಷದ ಪ್ರತಿಯೊಬ್ಬರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅದನ್ನು ಅರಿತುಕೊಂಡು ಪಕ್ಷವನ್ನು ಮುನ್ನೆಡೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.