ಶಿವಮೊಗ್ಗ: ಚಂದ್ರನ ಮೇಲೆ ಇಳಿದಿರುವುದು ಇಸ್ರೋ ವಿಜ್ಞಾನಿಗಳ ಸಾಧನೆಯಾಗಿದೆ. ಇದರಲ್ಲಿ ರಾಜಕಾರಣ ಹುಡುಕುವುದು ಸರಿಯಲ್ಲ. ವಿಜ್ಞಾನಿಗಳನ್ನು ಎಲ್ಲರೂ ಅಭಿನಂದಿಸಬೇಕಿದೆ. ಟೀಕೆ ಮಾಡಿದರೆ ಮುಟ್ಟಾಳರೆಂದು ಜನರೇ ಆಡಿಕೊಳ್ಳುವರು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಭಾರತದ ಧರ್ಮ, ಸಂಸ್ಕೃತಿ, ಸಂಸ್ಕಾರ ವಿಶ್ವಕ್ಕೆ ಮಾದರಿಯಾಗಿದೆ. ಈಗ ಚಂದ್ರನ ತಲುಪುವ ಮೂಲಕ ವಿಜ್ಞಾನ, ತಂತ್ರಜ್ಞಾನದಲ್ಲಿ ವಿಶ್ವಸಾಧನೆ ಮಾಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿಶ್ವದಲ್ಲೆ ಅತ್ಯಂತ ದೊಡ್ಡ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಅವರೇ ಬೆಂಗಳೂರಿಗೆ ಬಂದು ಅಭಿನಂದಿಸಿದ್ದಾರೆ. ಅದನ್ನು ಎಲ್ಲರೂ ಮೆಚ್ಚಲೇಬೇಕಿದೆ ಎಂದರು.
ಬಿಜೆಪಿಯವರು ಬೀದಿಗೆ ಬಂದಾಗಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಬಳಿಕ ಯಾರು ಬೀದಿಗೆ ಬರುತ್ತಾರೆಂದು ಗೊತ್ತಾಗಲಿದೆ.
ಡಿಕೆಶಿ ಹೇಳಿದಂತೆ ಎಚ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್‌ಗೆ ಹೋಗಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸೂರ್ಯ ಚಂದ್ರರು ಇರುವವರೆಗೆ ಕಾಂಗ್ರೆಸ್ ಬಿಟ್ಟ 17 ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಈಗ ಅವರನ್ನು ಸೆಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಪ್ರಯತ್ನ ಲಿಸುವುದಿಲ್ಲ ಎಂದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರು ಮಗನಿಗೆ ಟಿಕೆಟ್ ಕೊಡಿಸಲು ಕೆ.ಎಸ್.ಈಶ್ವರಪ್ಪ ಗುಂಪುಗಾರಿಕೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಕಾಂತೇಶ್ ಮಾದರಿಯೇ ಅಲ್ಲಿಯೂ ಸಾಕಷ್ಟು ಆಕಾಂಕ್ಷಿಯಾಗಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೋ ಅವರನ್ನು ಬೆಂಬಲಿಸಲು ಸಿದ್ಧ. ಆದರೆ ಹಾವೇರಿಯ 8 ವಿಧಾನಸಭಾಕ್ಷೇತ್ರದಲ್ಲಿ ಕಾಂತೇಶ್ ಓಡಾಡಿದ್ದು ಎಲ್ಲಡೆ ಕಾಂತೇಶ್‌ಗೆ ಸಾರ್ವಜನಿಕರು ಬೆನ್ನುತಟ್ಟಿದ್ದಾರೆ. ಹಾಗಾಗಿ ಕಾಂತೇಶ್‌ಗೆ ಟಿಕೆಟ್ ನೀಡಲಿ ಎಂಬುದು ನನ್ನ ಅಪೇಕ್ಷೆ ಎಂದು ಸ್ಪಷ್ಟಪಡಿಸಿದರು.