ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಕರ್ತವ್ಯನಿರತ ಪೊಲೀಸರು ಮದ್ಯ ಸೇವಿಸಿ ಕಾರ್ಯ ನಿರ್ವಹಿಸಿರುವ ವಿಡಿಯೋ ಸೆರೆಯಾಗಿರುವ ದೂರು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಂಭಾಗಣದಲ್ಲಿ ಅಧಿಕಾರಿಗಳ ತುರ್ತುಸಭೆ ಕರೆದು ಮಾತನಾಡಿದ ಅವರು, ಮಲ್ಲಪ್ಪನಹಳ್ಳಿ, ಹಳೆಕೋಟೆ, ದೊಡ್ಡ ಹಳ್ಳಿ, ಪಿಡಿಒಗಳು ಹಣ ವಸೂಲಿ ಮಾಡಿ ಇಒಗೆ ನೀಡಬೇಕು. ಶಾಸಕರಿಗೂ ತಲುಪಿಸಬೇಕು ಎಂದು ಹೇಳಿಕೊಂಡು ಕೆಲವು ಯೋಜನೆಗಳಡಿ ಬಿಲ್‌ಪಾಸ್ ಮಾಡಲು ಲಂಚ ಕೇಳುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಇಒಗಳು ಪರಿಶೀಲಿಸುವಂತೆ ಸೂಚಿಸಿದರು.
ಸಭೆಯಲ್ಲಿದ್ದ ಪಿಡಿಒಗಳು ಜನರು ನಿಮ್ಮ ಬಳಿ ಸುಳ್ಳು ದೂರು ನೀಡಿದ್ದಾರೆ. ನಾವು ಯಾರಿಂದಲೂ ಲಂಚ ಕೇಳಿಲ್ಲ ಎಂದು ಸಮಜಾಯಿಷಿ ನೀಡಿದರು. ಇಒ ಮುನಿರಾಜ್ ಪರಿಶೀಲಿಸುವುದಾಗಿ ತಿಳಿಸಿದರು.
ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಥೋತ್ಸವ (ಮಾ.13)ಗುರುವಾರದಿಂದ ಪ್ರಾರಂಭವಾಗಲಿದೆ. ಪ್ರತಿ ವರ್ಷದಂತೆ ಕಳೆದ 25 ವರ್ಷಗಳಿಂದ ದೇವಾಲಯ ಅಭಿವೃದ್ಧಿ ಮಾಡಿಕೊಂಡು ಬರಲಾಗುತ್ತಿದೆ. ನೂತನ ರಥ ನಿರ್ಮಾಣಕ್ಕೂ ಸ್ವಂತ ಹಣ ವ್ಯಯಿಸಲಾಗಿದೆ. ಇದೀಗ ಪ್ರಸಾದ ಹಂಚಲು ಸಂಸದ ಶ್ರೇಯಸ್ ಪಟೇಲ್ ತಕರಾರು ತೆಗೆದಿರುವುದು ಏಕೆ ಎಂದು ತಹಸೀಲ್ದಾರ್ ರೇಣುಕುಮಾರ್ ಅವರಿಗೆ ಪ್ರಶ್ನಿಸಿದರು.
ಈ ಹಿಂದೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ ತಾಲೂಕು ಆಡಳಿತದಿಂದ ಪ್ರಸಾದ ವಿನಿಯೋಗ ಮಾಡಲಾಗುವುದು. ಇದರಲ್ಲಿ ರಾಜಕೀಯ ಬೆರೆಸಬೇಡಿ. ಅಧಿಕಾರಿಗಳು ತಮ್ಮ ವಿವೇಚನೆಯಿಂದ ಕಾರ್ಯನಿರ್ವಹಿಸಿ. ಯಾವುದೇ ಪಕ್ಷವಾಗಲಿ ಜನರಿಗೆ ಉಪಯೋಗವಾಗುವಂತೆ ಕ್ರಮಕೈಗೊಳ್ಳಲಿ. ಚುನಾವಣೆಗಳು ಬಂದಾಗ ಜನರ ಒಲವು ನಿಲುವು ಹೇಗಿರುತ್ತದೆಯೋ ಹಾಗೇ ಆಗುತ್ತದೆ ಎಂದು ಹೇಳಿದರು.