ಜಿಲ್ಲೆ

ದೌರ್ಜನ್ಯಗಳಿಗೆ ಧರ್ಮ ಬೆರೆಸುವುದು ಸರಿಯಲ್ಲ

ಶಿಗ್ಗಾಂವಿ: ಧರ್ಮಸ್ಥಳವು ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಧರ್ಮವನ್ನು ಬೆರೆಸುವುದು ಸರಿಯಲ್ಲ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಗೊಟಗೋಡಿಯ ಜಾನಪದ ವಿವಿಗೆ ಮಂಗಳವಾರ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಜಗತ್ತು ಇರುವವರೆಗೂ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆಯಲ್ಲಿ ನಾವೆಲ್ಲರೂ ತೊಡಗಿಕೊಳ್ಳುತ್ತೇವೆ. ಧರ್ಮಸ್ಥಳದ ವಿಚಾರದಲ್ಲಿ ರಾಜಕಾರಣ ಮಾಡದೆ ನಿಷ್ಪಕ್ಷಪಾತ ತನಿಖೆಗೆ ಎಲ್ಲರೂ ಸಹಕರಿಸಬೇಕಿದೆ. ಸರ್ಕಾರ ಮತ್ತು ಎಸ್‌ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತದೆ ಎಂದರು.

ಜನಪದ ವಿವಿಯಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನಮಾನ ದೊರೆತರೆ ವಿವಿ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ. ಅರಿವು, ಸಂವಾದದ ಮೂಲಕ ಮಹಿಳೆಯರ ಸಮಸ್ಯೆಗಳನ್ನು ತಿಳಿದುಕೊಳ್ಳಲು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಾಗಿದೆ. ಮಹಿಳೆಯರ ಸಮಸ್ಯೆ ಅರಿತು ಕುಲಪತಿಗಳ ಗಮನಕ್ಕೆ ತರುವುದರ ಜತೆಗೆ ವಿಶ್ವವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಸೇರಿದಂತೆ ಸುಮಾರು 100 ಸಿಬ್ಬಂದಿ ಅವಶ್ಯಕತೆ ಇದೆ. ಈಗ ಕೇವಲ 25 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕೇವಲ ನಾಲ್ಕು ಮಹಿಳಾ ಸಿಬ್ಬಂದಿಗೆ ಅವಕಾಶ ದೊರೆತಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು ಎಂದರು.