ಜಿಲ್ಲೆ

ಸಿಎಂಗೆ ಷೋಕಾಸ್ ನೋಟಿಸ್ ನೀಡಿದ್ದು ಸರಿಯಲ್ಲ : ವಾಟಾಳ್ ನಾಗರಾಜ್

ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟಿಸ್ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಎಂದರೆ ಭ್ರಷ್ಟಯಾತ್ರೆಯಲ್ಲ. ಇದನ್ನು ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಎಚ್.ಡಿ.ಕುಮಾರಸ್ವಾಮಿ ಎಲ್ಲರೂ ತಿಳಿದುಕೊಳ್ಳಬೇಕು. ಮಹಾತ್ಮ ಗಾಂಧಿ ಮಾಡಿದ್ದು ನಿಜವಾದ ಪಾದಯಾತ್ರೆ. ಇವರು ಕೋಟಿ ಬೆಲೆಯ ಕಾರಿನಲ್ಲಿ ಬಂದು ಪಾದಯಾತ್ರೆ ಮಾಡಿದರೆ ಅದಕ್ಕೊಂದು ಬೆಲೆ ಇದೆಯೇ? ಎಂದು ಪ್ರಶ್ನಿಸಿದರು


ಯಾರೋ ದೂರು ಕೊಟ್ಟರು ಎಂದು ಸಿಎಂಗೆ ಷೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಬಸ್‌ಸ್ಟಾೃಂಡ್ ಬಳಿ ನಿಂತವರು, ಕಲಾಸಿಪಾಳ್ಯದಿಂದ ಬಂದವರು ದೂರು ಕೊಡಬಹುದು. ಆದರೆ ಸಿಎಂಗೆ ನೋಟಿಸ್ ಕೊಡುವಾಗ ಯೋಚನೆ ಮಾಡಬೇಕಿತ್ತು ಎಂದರು.


ಒಂದು ಕಡೆ ಪಾದಯಾತ್ರೆ, ಮತ್ತೊಂದು ಕಡೆ ರಾಜ್ಯಪಾಲರ ಭೇಟಿ, ಇಂತಹ ನಾಟಕ ರಾಜ್ಯದಲ್ಲಿ ನಡೆದಿದೆ. ರಾಜ್ಯಪಾಲರು ಯಾರ ಒತ್ತಡಕ್ಕೆ ಮಣಿದಿದ್ದಾರೋ ಗೊತ್ತಿಲ್ಲ. ಸರ್ಕಾರದ ಮೇಲೆ ಹಿಂದೆಂದೂ ಈ ರೀತಿ ರಾಜ್ಯಪಾಲರು ಗದಾಪ್ರಹಾರ ಮಾಡಿಲ್ಲ. ನೋಟಿಸ್ ಕೊಡಲು ಪ್ರಧಾನಿ ಅಥವಾ ಬಿಜೆಪಿಯವರು ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದರು


ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಈ ಕುರಿತು ನಿರ್ಧಾರವಾಗಲಿ. ಅದನ್ನು ಬಿಟ್ಟು ಸರ್ಕಾರ ಉರುಳಿಸುವ ಪ್ರಯತ್ನ ಸರಿಯಲ್ಲ. ರಾಜ್ಯಪಾಲರು ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.


ಸಿದ್ದರಾಮಯ್ಯ ಹೆದರುವ ಅವಶ್ಯಕತೆ ಇಲ್ಲ. ಈ ಹಿಂದೆ ಎಸ್.ಆರ್.ಬೊಮ್ಮಾಯಿ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಿದ್ದರು. ಅದನ್ನು ಸುಪ್ರೀಂಕೋರ್ಟ್ ತಪ್ಪು ಎಂದು ತೀರ್ಪು ನೀಡಿತ್ತು. ಈಗಲೂ ನಾನು ಅದನ್ನೇ ಹೇಳುತ್ತೇನೆ. ಯಾರದ್ದೇ ಸರ್ಕಾರ ಇರಲಿ, ಯಾರೇ ಸಿಎಂ ಆಗಿರಲಿ, ರಾಜ್ಯಪಾಲರು ಈ ರೀತಿ ನಡೆದುಕೊಳ್ಳಬಾರದು ಎಂದರು.
ಡಿಕೆಶಿ, ಕುಮಾರಸ್ವಾಮಿ ಇಬ್ಬರೂ ಮಾತನಾಡುತ್ತಿರುವುದು ರಾಜ್ಯಕ್ಕೆ ಅಗೌರವ ತರುವಂತಿದೆ. ಯಾರೇ ಆಗಲಿ ತೂಕದ ಮಾತುಗಳನ್ನು ಆಡಬೇಕು. ಇಬ್ಬರದ್ದು ಲಜ್ಜೆಗೆಟ್ಟ ಮಾತುಗಳು. ಒಬ್ಬರು ಸಿಎಂ ಆಗಿದ್ದವರು, ಇನ್ನೊಬ್ಬರು ಡಿಸಿಎಂ. ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.