ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬೆಳ್ಳಾವರ ಬಸವರಾಜು  
ಜಿಲ್ಲೆ

ಶಾಸಕ ಸುರೇಶ್ ವಿರುದ್ಧ ದೂರು ನೀಡಿರುವುದು ಸರಿಯಲ್ಲ

ಅಭಿನಯ್ ಎಚ್.ಎಂ

ಬೇಲೂರು: ಕಾಡಾನೆ ದಾಳಿಗೆ ಮಹಿಳೆ ಮೃತರಾದ ದಿನ ಶಾಸಕರು ಅಧಿಕಾರಿಗಳೊಂದಿಗೆ ಏರು ದನಿಯಲ್ಲಿ ಮಾತನಾಡಿದ್ದನ್ನು ನೆಪವಾಗಿಸಿಕೊಂಡ ಅರಣ್ಯ ಇಲಾಖೆಯವರು ಶಾಸಕ ಎಚ್.ಕೆ.ಸುರೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದು ಸರಿಯಲ್ಲ ಎಂದು ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬೆಳ್ಳಾವರ ಬಸವರಾಜು ಹೇಳಿದರು.

ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಯೊಂದು ದಾಳಿ ಮಾಡಿ ಮಹಿಳೆಯನ್ನು ಬಲಿ ಪಡೆದಿತ್ತು. ಗ್ರಾಮಸ್ಥರು ಸ್ಥಳಕ್ಕೆ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು ಬರಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು. ನಂತರ ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಜನರನ್ನು ಸಮಾಧಾನಪಡಿಸಲು ಮುಂದಾದರೂ ಯಾರೂ ಸುಮ್ಮನಾಗಲಿಲ್ಲ. ಆದರೆ ಬೆಳಗ್ಗೆ ಘಟನೆ ನಡೆದಿದ್ದರೂ ಜಿಲ್ಲಾಧಿಕಾರಿ ಸಂಜೆ ಬಂದಿದ್ದರಿಂದ ಜನರು ಜೋರಾಗಿ ಕೂಗಾಡ ತೊಡಗಿದರು ಎಂದು  ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ. ಇಲ್ಲ ನಮ್ಮನ್ನೇ ಸ್ಥಳಾಂತರಿಸಿ ಎಂದು ಒತ್ತಾಯಿಸಿದ ಸಂದರ್ಭ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ನಮ್ಮೊಂದಿಗೆ ನಡೆದುಕೊಂಡಿದ್ದು ಸರಿ ಇರಲಿಲ್ಲ. ಈ ಸಂದರ್ಭ ಶಾಸಕರು ಅಧಿಕಾರಿಗಳ ವಿರುದ್ಧ ಏರು ದನಿಯಲ್ಲಿ ಮಾತನಾಡಿದರು. ಇದನ್ನೇ ಅರಣ್ಯ ಇಲಾಖೆಯವರು ದೊಡ್ಡದು ಮಾಡಿ ಶಾಸಕ ಎಚ್.ಕೆ.ಸುರೇಶ್ ವಿರುದ್ಧ ಪೊಲೀಸ್ ಠಾಣೆಗೆ ಉದ್ದೇಶಪೂರ್ವಕವಾಗಿ ದೂರು ನೀಡಿರುವುದು ಸರಿಯಲ್ಲ ಎಂದರು.

ನಾವು ಕಷ್ಟಪಟ್ಟು ಬೆಳೆದ ಬೆಳೆ, ನಾಗರಿಕರು ಕಾಡಾನೆಗಳಿಂದ ಪ್ರಾಣ ಕಳೆದು ಕೊಂಡರೂ ಅರಣ್ಯ ಇಲಾಖೆಯವರು ಏಕೆ ಸುಮ್ಮನಿದ್ದಾರೆ. ಜತೆಗೆ ಕಾಡಾನೆಗಳಿಗೆ ಅರಣ್ಯ ಇಲಾಖೆಯಿಂದ ಆಹಾರಕ್ಕಾಗಿ ಎಲ್ಲೆಲ್ಲಿ ಏನೇನು ಬೆಳೆದಿದ್ದಾರೆ, ನೀರನ್ನು ಎಲ್ಲಿ ಶೇಖರಿಸಿದ್ದಾರೆ ತಿಳಿಸಲಿ. ಅವರು ಆನೆಗಳನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಲಷ್ಟೆ ಸೀಮಿತರಾಗಿದ್ದಾರೆಯೇ ಹೊರತು ಅವುಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸ ಮಾಡುತ್ತಿಲ್ಲ. ಮಾತಿನ ಭರದಲ್ಲಿ ಶಾಸಕರು ಅಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಶಾಸಕರ ವಿರುದ್ಧ ಕೇಸು ದಾಖಲಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಜಂಟಿ ಕಾರ್ಯದರ್ಶಿ ಮೋಹನ್ ಕುಮಾರ್, ಬೆಳೆಗಾರರಾದ ತಿಮ್ಮೇಗೌಡ, ಚಂದನ್, ಆದರ್ಶ, ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.