ಹುಬ್ಬಳ್ಳಿ : ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಯನ್ನು ಕೆಲವರು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ನಿಖಿಲ್ ಕಾಡ್ಸೆ ಹೇಳಿದರು.
ಇಲ್ಲಿನ ಲೋಹಿಯಾ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ರೀಡಾ ಸಂಕೀರ್ಣ ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರ ದಾಳಿಯನ್ನು ಮುಂದಿಟ್ಟುಕೊಂಡು ಯಾರೂ ರಾಜಕಾರಣ ಮಾಡಬಾರದು. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದಾಗಲೂ ಕುಹುಕದ ಹೇಳಿಕೆ ಸರಿಯಲ್ಲ ಎಂದರು.
ಭಯೋತ್ಪಾದಕರ ದಾಳಿ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿರಬೇಕು. ಆದರೆ, ಕೆಲವರು ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ನಂತರ ಅಭಿವೃದ್ಧಿ ಕೆಲಸಗಳು ಪ್ರಾರಂಭಗೊಂಡಿವೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಪ್ರವಾಸ ಮತ್ತಿತರ ಕ್ಷೇತ್ರಗಳು ಬೆಳೆಯುತ್ತಿವೆ. ಅಲ್ಲಿನ ಜನರು ಹೊಸ ಜೀವನ ಕಂಡುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಭದ್ರತಾ ವೈಫಲ್ಯದಿಂದ ಈ ದಾಳಿ ನಡೆದಿಲ್ಲ ಎಂದು ಸಮರ್ಥಿಸಿಕೊಂಡ ಸಚಿವೆ ರಕ್ಷಾ, ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕಲು ಎಲ್ಲ ರೀತಿಯಿಂದಲೂ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದರು.
ಭಾರತದಲ್ಲಿ 2036ರಲ್ಲಿ ಒಲಿಂಪಿಕ್ಸ್ ಆಯೋಜಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ರಾಷ್ಟ್ರದಲ್ಲಿ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ಮನೆಯಲ್ಲಿ ಕ್ರೀಡಾಪಟುಗಳು ಇರಬೇಕೆಂಬುದು ಪ್ರಧಾನಿ ಅವರ ಆಶಯ ಎಂದು ತಿಳಿಸಿದರು.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರೋಕ್ಷ ಹಾಗೂ ಅಪರೋಕ್ಷವಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿವೆ. ಸ್ಟಾರ್ಟ್ಅಪ್, ಮುದ್ರ ಯೋಜನೆ, ಮೇಕ್ ಇನ್ ಇಂಡಿಯಾ ಸೇರಿದಂತೆ ವಿವಿಧ ಯೋಜನೆಗಳಡಿಯೂ ಹೊಸ ಉದ್ಯಮಿಗಳು ಸೃಷ್ಟಿಯಾಗಿ, ಉದ್ಯೋಗ ಸೃಷ್ಟಿಸಿದ್ದಾರೆ ಎಂದು ತಿಳಿಸಿದರು.
ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಉಪಸ್ಥಿತರಿದ್ದರು.