ಜಿಲ್ಲೆ

ಅಂಬೇಡ್ಕರ್‌ರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ: ಡಾ.ಬಿ.ಸಿ.ನವೀನ್ ಕುಮಾರ್

ಮಡಿಕೇರಿ: ಇಡೀ ಮನುಕುಲದ ಮಹಾನ್ ಶಕ್ತಿಯಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇತ್ತೀಚಿನ ಸಾಮಾಜಿಕ ಮತ್ತು ಜಾತಿ ವ್ಯವಸ್ಥೆಯು ಒಂದು ಸಮುದಾಯಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂದು ಮಡಿಕೇರಿಯ ಆರ್.ಆರ್.ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್ ಕುಮಾರ್ ಬೇಸರ ವ್ಯಕ್ತಪಡಿಸಿದರು.


ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜನ್ಮ ದಿನಾಚರಣೆಯ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ನಗರಸಭೆಯ ಪೌರಕಾರ್ಮಿಕರಿಗೆ ಸ್ವೆಟರ್ ಹಾಗೂ ಶ್ರೀ ಶಕ್ತಿ ವೃದ್ಧಾಶ್ರಮದ ಸಂಧ್ಯಾಕಾಲದ ಬಂಧುಗಳಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಡಾ.ಅಂಬೇಡ್ಕರ್ ಅವರು ಶೋಷಿತ ಸಮಾಜದ ಧ್ವನಿಯಾಗಿ, ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವ ಕೆಲಸವನ್ನು ಶಿಕ್ಷಣದ ಮೂಲಕ ಮಾಡಿದ್ದಾರೆ. ಅವರೊಬ್ಬರು ಪರಿಪೂರ್ಣ ವ್ಯಕ್ತಿತ್ವ ಹೊಂದಿರುವವರು. ಜ್ಞಾನ, ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಅವರು ಕೇವಲ ಒಂದು ಜಾತಿಗೆ ಸೀಮಿತರಾಗಿಲ್ಲ. ಅಂಬೇಡ್ಕರ್ ಅವರು ಈ ಸಮಾಜದ ಶೋಷಿತ ವರ್ಗ, ಕಾರ್ಮಿಕರು, ಮಹಿಳೆಯರು, ರೈತರ ಅಭ್ಯುದಯ ಮತ್ತು ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.


ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಾಗರ ಇದ್ದಂತೆ, ಅವರ ಸಮ ಸಮಾಜದ ಕಲ್ಪನೆಯ ಕನಸನ್ನು ನನಸು ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ರತಿಯೊಂದು ವರ್ಗದವರ ಅಭಿವೃದ್ಧಿಯಲ್ಲೂ ಅಂಬೇಡ್ಕರ್ ಅವರ ಪಾತ್ರವಿದೆೆ. ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಸಿಗಲು ಕಾರಣಕರ್ತರಾಗಿರುವ ಅವರ ಚಿಂತನೆಗಳು ಸದಾ ಜೀವಂತವಾಗಿರಲಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್, ಪೌರ ಕಾರ್ಮಿಕರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಆದರೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆೆ. ಗಾಳಿಮಳೆಯನ್ನು ಲೆಕ್ಕಿಸದೆ ಮುಂಜಾನೆಯೇ ಎದ್ದು ನಗರವನ್ನು ಸ್ವಚ್ಛಗೊಳಿಸುವ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.


ದಲಿತ ಸಂಘರ್ಷ ಸಮಿತಿ ಇತ್ತೀಚೆಗೆ ನಗರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿತ್ತು. ಮುಂದಿನ ದಿನಗಳಲ್ಲೂ ಈ ರೀತಿಯ ಕಾರ್ಯಕ್ರಮವನ್ನು ನಿರಂತರಗೊಳಿಸಲಾಗುವುದು, ಆ ಮೂಲಕ ಪ್ರತಿಯೊಬ್ಬರು ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಲಾಗುವುದು. ಪೌರ ಕಾರ್ಮಿಕರ ಸೇವೆಯನ್ನು ಎಲ್ಲರೂ ಪರಿಗಣಿಸಬೇಕು ಮತ್ತು ಗೌರವಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಸಮಿತಿಯ ಕೊಡಗು-ಮೈಸೂರು ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಸಮಾಜ ಸೇವಕ ಪ್ರದೀಪ್ ಕರ್ಕೆರ, ನಗರಸಭೆಯ ಹಿರಿಯ ಪೌರಕಾರ್ಮಿಕ ರಾಮು, ವಿಕಾಸ್ ಜನಸೇವಾ ಟ್ರಸ್ಟ್ ಸದಸ್ಯೆ ಪೂವಮ್ಮ ಉಪಸ್ಥಿತರಿದ್ದರು. ಸಮಿತಿ ಸದಸ್ಯ ವೇಣುಕಿಶೋರ್ ಸ್ವಾಗತಿಸಿ, ಪ್ರೇಮ ಕೃಷ್ಣಪ್ಪ ನಿರೂಪಿಸಿ, ವಂದಿಸಿದರು.