ಜಿಲ್ಲೆ

ಸರಳವಲ್ಲ ಕವಿತೆ ರಚನೆ ದಾರಿ

ಸಿದ್ದಾಪುರ: ಕವಿತೆ ರಚನೆ ಸರಳ ದಾರಿಯಲ್ಲ.ಅದು ದಕ್ಕಬೇಕಾದರೆ ಕಷ್ಟ ಹೆಚ್ಚು. ಇಂಥ ಕಷ್ಟಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಪಕ್ವತೆ ಬರುತ್ತದೆ ಎಂದು ಕವಿ ಕೆ.ಬಿ.ವೀರಲಿಂಗನಗೌಡ ಹೇಳಿದರು.

ಪಟ್ಟಣದ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರಾವಣ ಕವಿಗೋಷ್ಠಿ ಮತ್ತು ಕವಿತೆ,ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತ್ಯ, ಸಿದ್ಧಾಂತ, ನ್ಯಾಯಪರ, ಸಮಾನತೆಯ ಆಶಯ ಇಟ್ಟುಕೊಂಡು ಬರೆಯಬೇಕು. ಕವಿತೆ ಅಂದರೆ ಕರುಳಿನಲ್ಲಿ ಅರಳುವ ಸರಳ ಹೂಗಳು. ವ್ಯಕ್ತಿ,ಸಮಾಜ,ವ್ಯವಸ್ಥೆಯಿಂದ ಘಾಸಿಗೊಂಡಾಗ ಕಾವ್ಯ ನಮ್ಮನ್ನು ಸಲಹುತ್ತದೆ ಎಂದರು.

ನ್ಯಾಯಾಧೀಶ ತಿಮ್ಮಯ್ಯ ಜಿ.ಮಾತನಾಡಿ, ಬರಹಗಾರರಿಗೆ ಅಧ್ಯಯನ ಮುಖ್ಯ. ಹೆಚ್ಚು,ಹೆಚ್ಚು ಓದಬೇಕು.ನಮ್ಮ ಭಾಷೆಯ, ಇತರ ಭಾಷೆಯ ಅನುವಾದಿತ ಕೃತಿಗಳನ್ನು ಓದಿ. ಸಾಹಿತ್ಯಕ್ಕೆ ವಿಶೇಷವಾದ ಶಕ್ತಿ ಇದೆ ಎಂದರು.

ಅಧ್ಯಕ್ಷತೆವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಮಾತನಾಡಿ, ನಾಡು,ನುಡಿ,ಕಲೆ,ಸಂಸ್ಕೃತಿಗಳ ಕುರಿತು ಯುವಮನಸ್ಸುಗಳಿಗೆ ಪ್ರೇರಣೆ ನೀಡುವ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ ಎಂದರು.

ಪತ್ರಕರ್ತ ಗಂಗಾಧರ ಕೊಳಗಿ, ಪೋ›.ರತ್ನಾಕರ ನಾಯ್ಕ ಮಾತನಾಡಿದರು.ಶಿವಾನಂದ ಹೊನ್ನೆಗುಂಡಿ, ತಾಲೂಕು ಕಸಾಪ ಖಜಾಂಚಿ ಪಿ.ಬಿ.ಹೊಸೂರ ಉಪಸ್ಥಿತರಿದ್ದರು

ಶ್ರಾವಣ ಕವಿಗೋಷ್ಠಿ ಪ್ರಯುಕ್ತ ಹಲವು ಕವಿಗಳು ಸ್ವರಚಿತ ಕವಿತೆ ವಾಚಿಸಿದರು. ಪ್ರಾಥಮಿಕ,ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕವಿತೆ,ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಾಯಕಿ ಸುಮಿತ್ರಾ ಶೇಟ್ ಕವಿತೆ ಹಾಡಿದರು. ರತ್ನಾಕರ ನಾಯ್ಕ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ವಂದಿಸಿದರು.