ಪಾಂಡವಪುರದ ಸೆಸ್ಕ್ ವಿಭಾಗೀಯ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಲೈನ್‌ಮನ್‌ಗಳನ್ನು ಸನ್ಮಾನಿಸಲಾಯಿತು. ಟಿ.ಪ್ರದೀಪ್, ಶಾರದಾಕುಮಾರಿ, ಚನ್ನಕೇಶವ, ಆರ್.ಮಹದೇವಪ್ಪ, ಕುಮಾರ್, ವಿ.ಪುಟ್ಟಸ್ವಾಮಿ, ಪ್ರಶಾಂತ್ ಕುಮಾರ್, ಎ.ಬಿ.ಕಿರಣ್ ಕುಮಾರ್, ಎಸ್.ಸುರೇಶ್ ಇತರರಿದ್ದರು. 
ಜಿಲ್ಲೆ

ನಿಷ್ಠೆಯಿಂದ ಸೇವೆ ಸಲ್ಲಿಸುವುದು ಅಗತ್ಯ

ಅಭಿನಯ್ ಎಚ್.ಎಂ

ಪಾಂಡವಪುರ: ಸಂಘಟಿತ, ಅಸಂಘಟಿತ ಹಾಗೂ ಶ್ರಮಿಕ ವರ್ಗದವರು ತಾವು ಸೇವೆ ಸಲ್ಲಿಸುವ ಸಂಸ್ಥೆಗಳಲ್ಲಿ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದರೆ ಅಂತಹ ಸಂಸ್ಥೆ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಟಿ.ಪ್ರದೀಪ್ ಹೇಳಿದರು.

ಪಟ್ಟಣದ ಸೆಸ್ಕ್ ವಿಭಾಗೀಯ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಮಿಕರ ದಿನ ಆಚರಣೆ ಉದ್ಘಾಟಿಸಿ ಮಾತನಾಡಿದರು.

1942ರಿಂದಲೂ ದೇಶದಲ್ಲಿ ಕಾರ್ಮಿಕ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರು ಕಾರ್ಮಿಕರ ಸಂರಕ್ಷಣೆಗಾಗಿ ಸಂವಿಧಾನದಲ್ಲಿ ಹಲವು ಕಾನೂನನ್ನು ಜಾರಿಗೊಳಿಸಿದ್ದು, ಇದರ ಪರಿಣಾಮ ಕಾರ್ಮಿಕರ ಕೆಲಸದ ಅವಧಿಯನ್ನು 14ರಿಂದ 8 ಗಂಟೆಗೆ ಇಳಿಯಿತು. ಅಲ್ಲದೆ, ಮಹಿಳೆಯರಿಗೆ ಹೆರಿಗೆ ರಜೆ, ಪಿಎಫ್, ಇಎಸ್‌ಐ ಸೇರಿದಂತೆ ಹಲವು ಸೌಲಭ್ಯಗಳನ್ನು ಜಾರಿಗೆ ತರಲಾಯಿತು ಎಂದರು.

ಇಲಾಖೆ, ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹಾಗೂ ಸೇವಾ ಅವಧಿಯಲ್ಲಿ ಅಕಾಲಿಕ ಮರಣ ಹೊಂದಿದ ನೌಕರರ ಕುಟುಂಬವನ್ನು ಗೌರವಿಸುವುದು ಕಾರ್ಮಿಕ ದಿನಾಚರಣೆಯ ಉದ್ದೇಶ. ಆದರೆ ಅಂತಹ ಕೆಲಸವನ್ನು ನಾವೆಲ್ಲರೂ ಮರೆಯುತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಶ್ರಮಿಕರಿಗಾಗಿ ಸರ್ಕಾರಗಳು ಹಲವು ಸೌಲಭ್ಯಗಳನ್ನು ಜಾರಿಗೊಳಿಸಿದ್ದು, ಎಲ್ಲವನ್ನೂ ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಕಾರ್ಮಿಕರು ತಾವು ಕೆಲಸ ಮಾಡುವ ಜಾಗಗಲ್ಲಿ ಎಚ್ಚರಿಕೆಯಿಂದ ಮಾಡಬೇಕು ಎಂದು ಸಲಹೆ ನೀಡಿದರು.

ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಲೈನ್‌ಮನ್‌ಗಳು ಎಚ್ಚರಿಕೆ, ನಿಯಮಾನುಸಾರವಾಗಿ ಕೆಲಸ ಮಾಡಬೇಕು. ಸೆಸ್ಕ್ ವತಿಯಿಂದ ನಡೆಯುವ ಕೆಲಸಗಳ ಸ್ಥಳಕ್ಕೆ ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸಮಸ್ಯೆಯಾದರೆ ಸಂಬಂಧಿಸಿದ ಶಾಖಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುರಕ್ಷಿತ ಸಾಧನ ಬಳಸಿ ಉತ್ತಮ ಸೇವೆ ಸಲ್ಲಿಸಿದ ಲೈನ್‌ಮನ್‌ಗಳನ್ನು ಸನ್ಮಾನಿಸಲಾಯಿತು. ಮಹಿಳಾ ಲೈನ್‌ಮನ್ ಶಾರದಾಕುಮಾರಿ ಕಾರ್ಯಕ್ರಮ ಉದ್ಘಾಟಿಸಿದರು. ಲೈನ್‌ಮನ್ ಚನ್ನಕೇಶವ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಾಧಿಕಾರಿ ಆರ್.ಮಹದೇವಪ್ಪ, ಆಂತರಿಕ ಲೆಕ್ಕ ಪರಿಶೋಧನಾಧಿಕಾರಿ ಕುಮಾರ್, ಎಇಇಗಳಾದ ವಿ.ಪುಟ್ಟಸ್ವಾಮಿ, ಪ್ರಶಾಂತ್ ಕುಮಾರ್, ಕೇಂದ್ರ ಸಮಿತಿ ಸದಸ್ಯರಾದ ಎ.ಬಿ.ಕಿರಣ್ ಕುಮಾರ್, ಎಸ್.ಸುರೇಶ್, 466 ಸ್ಥಳೀಯ ಕಲ್ಯಾಣ ಸಂಸ್ಥೆ ಅಧ್ಯಕ್ಷ ಟಿ.ರಾಜು, 659 ಸ್ಥಳೀಯ ಸಮಿತಿ ಅಧ್ಯಕ್ಷ ಎಚ್.ಕೆ.ರವಿಗೌಡ, ಕಾರ್ಯದರ್ಶಿಗಳಾದ ರಘು, ಸಿ.ಎನ್.ಜಗದೀಶ್ ಇತರರಿದ್ದರು.