ಜಿಲ್ಲೆ

ಸಮುದಾಯದ ಆರೋಗ್ಯ ಕಾಪಾಡುವುದು ಅಗತ್ಯ

ಗುತ್ತಲ: ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೇವೆ ಹೆಚ್ಚಿಸುವ ಜತೆಗೆ ಅತ್ಯಂತ ಸುಲಭವಾಗಿ ಆರೋಗ್ಯ ಸೇವೆಗಳು ಲಭಿಸುವಂತೆ ಮಾಡಿ ಸಮುದಾಯದ ಆರೋಗ್ಯ ಕಾಪಾಡುವುದು ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಉದ್ದೇಶವಾಗಿದೆ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆ ಪ್ರತಿ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡಬೇಕು. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಚರ್ಮರೋಗ, ಕಣ್ಣು, ಕಿವಿ, ದಂತ ಸೇರಿದಂತೆ ಅನೇಕ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆಯುಷ್ಮಾನ್ ಭಾರತ ಯೋಜನೆಯಿಂದ ಕರ್ನಾಟಕ ರಾಜ್ಯದ 2 ಕೋಟಿಗೂ ಅಧಿಕ ಜನರಿಗೆ ಅನುಕೂಲವಾಗಿದೆ ಎಂದರು.

ಅಭಿಯಾನದಲ್ಲಿ ಸುಮಾರು 981 ರೋಗಿಗಳಿಗೆ ವಿವಿಧ ಚಿಕಿತ್ಸೆ ನೀಡಲಾಯಿತು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಮಹೇಶ ಹಾವನೂರ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ ಜಯಾನಂದ, ತಾಲೂಕ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಮಹೇಶ ಹಾವನೂರ, ಡಾ. ದೀಪ್ತಿ ಮಮದಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಪಪಂ ಅಧ್ಯಕ್ಷೆ ಮಾಳವ್ವ ಗೊರವರ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರುವತ್ತಿಗೌಡ್ರ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸಿದ್ದಬಸಪ್ಪ ಯಾದವ, ಸಮುದಾಯ ಆರೋಗ್ಯ ಕೇಂದ್ರ ರಕ್ಷಾ ಸಮಿತಿ ಸದಸ್ಯರು ಇತರರಿದ್ದರು.