ಹೊಳೆನರಸೀಪುರ : ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸುವುದು ಅಗತ್ಯವಿದೆ. ಕಾನೂನನ್ನು ಗೌರವಿಸುವುದು ಎಲ್ಲರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಲು ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸಂಚಾರ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚು ಸಂಭವಿಸುತ್ತಿರುವುದು ವಿಷಾದನೀಯ. ಇದಕ್ಕೆ ಅಜಾಗರೂಕತೆ ಮತ್ತು ಸಂಚಾರ ನಿಯಮ ಅನುಸರಿಸದಿರುವುದೇ ಮುಖ್ಯ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆದ ರಸ್ತೆ ಸಂಚಾರ ಸುರಕ್ಷಾ ಅಭಿಯಾನದಲ್ಲಿ ಹಲವು ಶಾಲಾ-ಕಾಲೇಜು ಮಕ್ಕಳು ಪಾಲ್ಗೊಂಡು ಸಂಚಾರ ನಿಯಮ ಪಾಲಿಸುವಂತೆ ಅರಿವು ಜಾಥಾ ನಡೆಸಿದರು. ಜಾಥಾದಲ್ಲಿ ಹೆಲ್ಮೆಟ್ ಧರಿಸುವುದು, ಅತಿವೇಗ ಹಾಗೂ ಅಜಾಗರೂಕ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅಡ್ಡಾದಿಡ್ಡಿ ಪಾರ್ಕಿಂಗ್, ವಾಹನಗಳ ದಾಖಲೆ, ಚಾಲನಾ ಪರವಾನಗಿ, ವಾಹನ ವಿಮೆ, ಜೀವ ವಿಮೆ ಮಾಡಿಸಿಕೊಳ್ಳಿ ಎಂದು ಜಾಗೃತಿ ಫಲಕಗಳನ್ನು ಹಿಡಿದು ಸಾರ್ವಜನಿಕವಾಗಿ ಅರಿವು ಮೂಡಿಸಿದರು.
ವೃತ್ತ ನಿರೀಕ್ಷಕ ಬಿ.ಆರ್.ಪ್ರದೀಪ್, ನಗರಾ ಠಾಣೆ ಪಿಎಸ್‌ಐ ಅಭಿಜಿತ್, ಹಳ್ಳಿ ಮೈಸೂರು ಪೊಲೀಸ್ ಠಾಣೆಯ ಪಿಎಎಸ್‌ಐ ಟಿ.ಸಲ್ಮಾನ್ ಹಾಗೂ ಸ್ಕೌಟ್ಸ್ ಆಂಡ್ ಗೈಡ್ಸ್ ನ ಅಧಿಕಾರಿ ಕುಮುದಾ ನೇತೃತ್ವ ವಹಿಸಿದ್ದರು.