ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಸಮುದಾಯಭವನದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ದಾನಿಗಳು ರಕ್ತದಾನ ಮಾಡಿದರು. ಇಂದೂಧರ್, ಗೀತಾ, ನತೀಶ್, ಮಹೇಶ್ ತಿಮ್ಮಯ್ಯ, ರವಿ, ಶಾಂತಿ, ಧರಣೇಶ್ ಇದ್ದರು.  
ಜಿಲ್ಲೆ

ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಅವಶ್ಯ

ಅಭಿನಯ್ ಎಚ್.ಎಂ

ಸೋಮವಾರಪೇಟೆ: ಚೌಡ್ಲು ಗ್ರಾಮ ಪಂಚಾಯಿತಿ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ವತಿಯಿಂದ ಚೌಡ್ಲು ಸಮುದಾಯ ಭವನದಲ್ಲಿ ಸೋಮವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಥಮಿಕ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಇಂದೂಧರ್, ರಕ್ತದಾನದಿಂದ ಅನೇಕ ಉಪಯೋಗಗಳಿದ್ದು, ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅದರಲ್ಲೂ ಯುವಜನತೆ ಹಿಂಜರಿಕೆಯಿಲ್ಲದೆ ರಕ್ತದಾನ ಮಾಡಬೇಕು. ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ, ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಜತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.

ಕೊಡಗಿನಲ್ಲಿ 5 ಲಕ್ಷ ಜನಸಂಖ್ಯೆಯಲ್ಲಿ 2 ಲಕ್ಷದಷ್ಟು ಜನರು ರಕ್ತದಾನ ಮಾಡುವುದಕ್ಕೆ ಅರ್ಹರಾಗಿದ್ದಾರೆ. ಇಷ್ಟೂ ಜನರು ರಕ್ತದಾನ ಮಾಡಿದರೆ ರಕ್ತ ಸಂಗ್ರಹವಿರುತ್ತದೆ. ಪ್ರಸಕ್ತ ಶೇ.10ರಷ್ಟು ಜನರು ರಕ್ತದಾನ ಮಾಡುತ್ತಿದ್ದಾರೆ. ನೆಗಟಿವ್ ಮಾದರಿಯ ರಕ್ತಕ್ಕೆ ಬೇಡಿಕೆ ಹೆಚ್ಚಿದ್ದು, ದಾನಿಗಳು ನೋಂದಣಿ ಮಾಡಿಕೊಳ್ಳಬೇಕು. ಅವಶ್ಯಕತೆಯಿದ್ದ ಸಂದರ್ಭದಲ್ಲಿ ರಕ್ತನಿಧಿ ಕೇಂದ್ರದಿಂದ ಫೋನ್ ಮಾಡುತ್ತಾರೆ. ಒಬ್ಬ ರಕ್ತದಾನಿ ಮೂರು ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನತೀಶ್ ಮಂದಣ್ಣ, ಪಿಡಿಒ ರವಿ ನಾಯರ್, ಸಮುದಾಯ ಆರೋಗ್ಯಾಧಿಕಾರಿ ಧರಣೇಶ್, ಗ್ರಾಪಂ ಸದಸ್ಯರು ಇದ್ದರು. 33 ಜನರು ರಕ್ತದಾನ ಮಾಡಿದರು.