ಎನ್.ಆರ್.ಪುರ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸಲು ಸರ್ಕಾರ ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ನಾಟಕ ಹಾಗೂ ವಿಚಾರಗೋಷ್ಠಿಗಳನ್ನು ನಡೆಸುತ್ತಿದೆ ಎಂದು ತಾಲೂಕು ಪ್ರೌಢಶಾಲೆ ವಿಭಾಗದ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶಪ್ಪ ತಿಳಿಸಿದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ವಿಜ್ಞಾನ ನಾಟಕ ಹಾಗೂ ವಿಚಾರಗೋಷ್ಠಿ ಸ್ಪರ್ಧೆ ಉದ್ಘಾಟನೆಯಲ್ಲಿ ಮಾತನಾಡಿದರು.
ಪ್ರತಿ ಮಗುವನ್ನೂ ವಿಜ್ಞಾನಿಯಾಗಿ ರೂಪಿಸಬೇಕಾಗಿದೆ. ಶಿಕ್ಷಕರಿಗೆ ಕಾರ್ಯದೊತ್ತಡವಿದ್ದರೂ ಇಂಥ ಕಾರ್ಯಕ್ರಮಗಳಿಗೆ ಬಿಡುವು ಮಾಡಿಕೊಂಡು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಬಂದ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕಿ ಸಂಗೀತಾ ಮಾತನಾಡಿ, ಪ್ರತಿ ವರ್ಷ ವಿಜ್ಞಾನ ನಾಟಕ, ವಿಚಾರಗೋಷ್ಠಿ, ವಿಜ್ಞಾನ ವಸ್ತು ಪ್ರದರ್ಶನ ನಡೆಸಲಾಗುತ್ತಿದೆ. ಮಕ್ಕಳಿಗೆ ವಿಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸಿ ದೇಶದ ಆಸ್ತಿಯಾಗಿ ಮಾಡಬೇಕಾಗಿದೆ. ಸೆಪ್ಟಂಬರ್‌ನಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ, ವಿಚಾರಗೋಷ್ಠಿ ಇರುವುದರಿಂದ ತಾಲೂಕು ಮಟ್ಟದ ಕಾರ್ಯಕ್ರಮ ನಡೆಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಿಹಿಸುವುದು ಮುಖ್ಯವಾಗಿದೆ. ಗೆದ್ದ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹಮಾನವನ್ನು ನಗದು ರೂಪದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಭಾವನೆ ಇರುತ್ತದೆ. ವಿಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಂದ ವೈಜ್ಞಾನಿಕ ಚಿಂತನೆಗೆ ಅವಕಾಶ ಸಿಗಲಿದೆ ಎಂದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಎಸ್.ಕೃಷ್ಣಮೂರ್ತಿ, ಮುಖ್ಯಶಿಕ್ಷಕ ಶ್ರೀಕಾಂತ್, ತೀರ್ಪುಗಾರರಾದ ಅಭಿಷೇಕ್, ಮಹೇಶ್, ಸೋಮಶೇಖರ್, ಪ್ರದೀಪ್ ಇದ್ದರು.