ಜಿಲ್ಲೆ

ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ ಅಗತ್ಯ

Mangaluru - Shravan Kumar Nala

ಮಂಗಳೂರು: ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಮ್ಮಯ್ಯ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಬಗ್ಗೆ ಎಚ್ಚರ ಅತೀ ಅಗತ್ಯ. ಜನವರಿಯಿಂದ ಇದುವರೆಗೆ 211 ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ ಎಂದರು.

ಡೆಂಗ್ಯೂ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಯಾವುದೇ ಜ್ವರ ಅಥವಾ ಡೆಂಗ್ಯೂ ಪಾಸಿಟಿವ್ ಕಂಡುಬಂದರೆ ಸ್ವಯಂ ಪ್ರೇರಿತವಾಗಿ ಯಾವುದೇ ಮಾತ್ರೆ, ಔಷಧಳನ್ನು ತೆಗೆದುಕೊಳ್ಳದೆ ವೈದ್ಯರನ್ನು ಸಂಪರ್ಕಿಸಬೇಕು. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಪ್ಲೇಟ್ ಲೆಟ್ ಕಡಿಮೆಯಾಗಿ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದರು.

ಜನವರಿಯಿಂದ ಇದುವರೆ ಜಿಲ್ಲೆಯಲ್ಲಿ ಮಲೇರಿಯಾ 25 ಪ್ರಕರಣ, ಒಂದು ಚಿಕುನ್‌ಗುಣ್ಯ ಪ್ರಕರಣಗಳು ಪತ್ತೆಯಾಗಿವೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ ವಾಂತಿ ಇತ್ಯಾದಿ ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಇಂತಹ ಸಾಮಾನ್ಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಸಾರ್ವಜನಿಕರ ಸಹಭಾಗಿತ್ವವಿದ್ದರೆ ಮಾತ್ರ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯ ಎಂದು ಡಿಎಚ್‌ಒ ಹೇಳಿದರು.

ಜಿಲ್ಲಾ ಮಲೇರಿಯಾ ನಿಯಂತ್ರಾಣಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಉಪಸ್ಥಿರಿದ್ದರು.