ಜಿಲ್ಲೆ

ಶಿಕ್ಷಕರು ಜ್ಞಾನ ಹೆಚ್ಚಿಸಿಕೊಳ್ಳುವುದು ಅಗತ್ಯ: ಕುಲಸಚಿವೆ ಎಂ.ಕೆ.ಸವಿತಾ

ಮೈಸೂರು:  ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಪ್ರಭಾವ ಬೀರುತ್ತಾರೆ. ಹಾಗಾಗಿ ಇತರರು ಅನುಸರಣೆ ಮಾಡುವ ಮಾದರಿ ಆದರ್ಶವಾಗಿರಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.

ಮೈಸೂರಿನ ವಿಶ್ವವಿದ್ಯಾಲಯದ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಿಂದ ಮಂಗಳವಾರ ಆಯೋಜಿಸಿದ್ದ ಒಂಬತ್ತನೆಯ ಬೋಧಕ ವರ್ಗ ಸ್ಥಾಪನಾ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರ ಪಾತ್ರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖವಾದದ್ದು. ತರಗತಿಗಳಲ್ಲಿ ಶಿಕ್ಷಕರು ಯಾವುದೇ ತಾರತಮ್ಯ ಮಾಡದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಉತ್ತಮ ಸಂಬಂಧ ರೂಪುಗೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಸರಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಆದರ್ಶವಾಗುವಂತೆ ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವದೊಂದಿಗೆ ಮಾದರಿ ಆಗಬೇಕು. ಇಂದಿನ ದಿನದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿದ್ದು, ಅದಕ್ಕೆ ತಕ್ಕಂತೆ ಶಿಕ್ಷಕರು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಮತ್ತು ಜಾತಿ ವ್ಯವಸ್ಥೆ ಇರದೇ ಮಕ್ಕಳಲ್ಲಿ ಏಕತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಂತಾಗಬೇಕು ಎಂದು ಹೇಳಿದರು.

ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್.ಪಿ.ಜ್ಯೋತಿ ಮಾತನಾಡಿ, ತಂದೆ, ತಾಯಿಗಳ ನಂತರ ವಿದ್ಯಾರ್ಥಿಗಳಿಗೆ ಗುರುಗಳ ಪಾತ್ರ ಬಹಳ ಮುಖ್ಯ. ಮಕ್ಕಳನ್ನು ಶಿಕ್ಷಕರು ಪ್ರಶ್ನೆ ಕೇಳುವ ಮಟ್ಟಕ್ಕೆ ಬೆಳೆಸಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದರು.

ಸಹಾಯಕ ಪ್ರಾಧ್ಯಾಪಕ ನಂಜುಂಡಸ್ವಾಮಿ ಇದ್ದರು.