ಮಹಾಲಿಂಗಪುರ: ಬೆಳೆಯುವ ಜಡೆಗಳ ಒಡೆಯನ ದೇವಸ್ಥಾನಕ್ಕೆ ಆಗಮಿಸಿ, ಕಾರ್ಯಕ್ರಮಗಳನ್ನು ವೀಕ್ಷಿಸುವ ಭಾಗ್ಯ ದೊರೆತದ್ದು ನನ್ನ ಪುಣ್ಯ ಎಂದು ಎಂಎಲ್‌ಸಿ ಸಿ.ಟಿ. ರವಿ ಹೇಳಿದರು.
ಪಟ್ಟಣದ ಗುರು ಮಹಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ಜರುಗಿದ ಜಟೋತ್ಸವ ಮತ್ತು ಬೆಳ್ಳಿ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀ ಮಹಾಲಿಂಗೇಶ್ವರರ ಕೃಪೆಯಿಂದ ಇಲ್ಲಿನ ಜನರು ಸೌಖ್ಯವಾಗಿದ್ದು ನನಗೆ ಕಂಡು ಬಂದಿತು. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ ಮಹಾಲಿಂಗೇಶ್ವರ ಶ್ರೀಗಳಿಗೂ ಹಾಗೂ ಬಿಜೆಪಿ ಮುಖಂಡ ಮನೋಹರ ಶಿರೋಳ ಅವರಿಗೆ ಋಣಿಯಾಗಿರುವೆ ಎಂದರು.
ಮಹಾಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಇಲ್ಲಿ ಯಾವುದೇ ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲ ಧರ್ಮ ಮತ್ತು ಪಂಗಡಗಳ ಜನರು ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ ಎಂದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು. ಬಿಜೆಪಿ ಮುಖಂಡ ಮನೋಹರ ಶಿರೋಳ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು.
ಶಾಸಕ ಸಿದ್ದು ಸವದಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ಶಶಿಕಾಂತ ವಿಶ್ವಬ್ರಾಹ್ಮಣ, ಬಸವರಾಜ ಯಂಕಾಚಿ, ಸಿ.ಟಿ. ಉಪಾಧ್ಯಾಯ, ಡಾ.ವಿಜಯಲಕ್ಷ್ಮೀ ತುಂಗಳ, ಲಕ್ಕಪ್ಪ ಚಮಕೇರಿ, ಸಂಜು ಬಾರಕೋಲ, ಶಿವಾನಂದ ಅಂಗಡಿ, ಹನುಮಂತ ಜಮಾದಾರ ಮತ್ತಿತರರಿದ್ದರು.