ತಿ.ನರಸೀಪುರ: ರಾಜ್ಯದಾದ್ಯಂತ ಮೇ 5ರಿಂದ ಜನಗಣತಿ ಮತ್ತು ಜಾತಿ ಗಣತಿ ಆರಂಭವಾಗುವುದರಿಂದ ಪರಿಶಿಷ್ಟರ ಪಟ್ಟಿಯಲ್ಲಿ ಬರುವ ಬಲಗೈ ಬಾಂಧವರು ಜಾತಿಯನ್ನು ಪರಿಶಿಷ್ಟ ಜಾತಿ, ಉಪಜಾತಿ ಕಾಲಂನಲ್ಲಿ ಹೊಲಯ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ತಾಲೂಕು ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಸಮುದಾಯಕ್ಕೆ ಸಲಹೆ ನೀಡಿದ್ದಾರೆ.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಜಾತಿ ಜನಗಣತಿಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಯ ಮೀಸಲು ವರ್ಗೀಕರಣಕ್ಕೆ ರಾಜ್ಯ ಸರ್ಕಾರ ದತ್ತಾಂಶ ಸಂಗ್ರಹಕ್ಕಾಗಿ ನಡೆಸುತ್ತಿರುವ ಜಾತಿ ಜನಗಣತಿ ಸಮೀಕ್ಷೆ ಮಹತ್ವದ್ದಾಗಿದೆ. ತಾಲೂಕು, ಜಿಲ್ಲೆ ಹಾಗೂ ನಾಡಿನ ಸಮಸ್ತ ಕುಲಬಂಧುಗಳು ಹಿಂಜರಿಕೆ ಬಿಟ್ಟು ಜಾತಿಯ ಉಪ ಕಾಲಂನಲ್ಲಿ ಹೊಲಯ ನಮೂಸಬೇಕು ಎಂದು ಸಲಹೆ ನೀಡಿದರು.
ನ್ಯಾ.ಸದಾಶಿವ ಆಯೋಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರದಿಯಲ್ಲಿ ಮೀಸಲು ಪ್ರಮಾಣದ ವರ್ಗೀಕರಣವೇ ಅವೈಜ್ಞಾನಿಕವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿರುವ ನಮ್ಮ ಸಮುದಾಯವನ್ನು ಸಮೀಕ್ಷೆ ವೇಳೆ ಜಾತಿಯ ಉಪ ಕಾಲಂನಲ್ಲಿ ತಪ್ಪಾಗಿ ನಮೂದಿಸಿದ್ದರಿಂದ ಪ್ರಥಮ ಸ್ಥಾನದಲ್ಲಿ ಇರಬೇಕಾದ ನಾವು, ಎರಡನೇ ಸ್ಥಾನಕ್ಕೆ ನೂಕಲ್ಪಟ್ಟಿದ್ದೇವೆ. ಇಂತಹ ಪ್ರಮಾದ ಈಗಿನ ಸಮೀಕ್ಷೆ ವೇಳೆ ಮತ್ತೆ ಮರುಕಳಿಸಬಾರದು. ಮಾದಿಗರ ಕ್ರಾಂತಿಕಾರಿ ಹೋರಾಟದ ಯಾತ್ರೆಯ ವೇಳೆ ಭಾಸ್ಕರ್ ಪ್ರಸಾದ್ ಮುಖ್ಯಮಂತ್ರಿಗಳು ಸೇರಿದಂತೆ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಪಕ್ಷಾತೀತವಾಗಿ ಖಂಡಿಸುತ್ತೇವೆ. ಹೋರಾಟಗಾರನೊಬ್ಬ ಚಳವಳಿ ನಡೆಸುವಾಗ ಸಭ್ಯತೆ ಎಲ್ಲೆಯನ್ನು ಮೀರಿ ವರ್ತಿಸಬಾರದು ಎಂದು ಕರೋಹಟ್ಟಿ ಮಹದೇವಯ್ಯ ಕಿಡಿಕಾರಿದರು.
ದಲಿತ ಸಮುದಾಯದ ಮುಖಂಡ ಸೋಸಲೆ ಎಸ್.ಆರ್.ಶಶಿಕಾಂತ್ ಮಾತನಾಡಿ, ಸಮುದಾಯದ ಜನರು ಜಾತಿ ಜನಗಣತಿ ವೇಳೆ ಪರಿಶಿಷ್ಟರ ಪಟ್ಟಿಯಲ್ಲಿರುವ ಸೂಚಿತ ಜಾತಿಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಜಾತಿಯ ಉಪ ಕಾಲಂನಲ್ಲಿ ಕೆಲವರು ಹೊಲಯ ಅಥವಾ ಛಲವಾದಿ ಅಂತ ನಮೂದಿಸುವುದರಿಂದ ಗೊಂದಲ ಉಂಟಾಗಲಿದೆ. ಉತ್ತರ ಕರ್ನಾಟಕವಾಗಲಿ ಅಥವಾ ದಕ್ಷಿಣ ನಾಡಿನ ಜನರಾಗಲಿ ಕಡ್ಡಾಯವಾಗಿ ಹೊಲಯ ಎಂದೇ ನಮೂದಿಸಬೇಕು. ಈ ಬಗ್ಗೆ ಸ್ಥಳೀಯ ಮುಖಂಡರು ಮತ್ತು ಪ್ರಜ್ಞಾವಂತ ನಾಗರಿಕರು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಕೆ.ಎನ್.ಪ್ರಭುಸ್ವಾಮಿ ಹಾಗೂ ಸೋಸಲೆ ಮಹದೇವಸ್ವಾಮಿ ಮಾತನಾಡಿದರು. ಎಸ್.ಎನ್.ಸಿದ್ಧಾರ್ಥ, ಕುಕ್ಕೂರು ಪ್ರಸನ್ನ, ಎನ್.ಲಿಂಗಪ್ಪಾಜಿ, ತುಂಬಲ ಮಂಜುನಾಥ್, ಅಂದಾನಿ, ಗಣೇಶಸ್ವಾಮಿ, ಡಾ.ಬಿ.ಕೆ.ಜ್ಞಾನಪ್ರಕಾಶ್, ಶಿವಮೂರ್ತಿ, ವೆಂಕಟರಮಣಸ್ವಾಮಿ, ನಾಗರಾಜ ಮೂರ್ತಿ, ಮರಿಮಹದೇವಯ್ಯ(ಅರ್ಜುನ), ಬನ್ನಳ್ಳಿಹುಂಡಿ ಸೋಮಣ್ಣ, ಬಿ.ಆರ್.ಪುಟ್ಟಸ್ವಾಮಿ, ನಿಲಸೋಗೆ ಬಸವರಾಜು, ಚಿದರವಳ್ಳಿ ಮಹೇಶ್, ಗವಿಸಿದ್ದಯ್ಯ, ಚೌಹಳ್ಳಿ ಗಿರೀಶ್, ಕನ್ನಳ್ಳಿ ಕುಮಾರಸ್ವಾಮಿ, ಮೂಗೂರು ಎಂ.ಕೆ.ಸಿದ್ದರಾಜು, ಎಂ.ಎಂ.ಜಗದೀಶ್, ಕೆ.ಗಣೇಶ, ಎಂ.ಮಿಥುನ್, ಕೆಂಚಪ್ಪ, ಎನ್.ಮಹೇಶ, ಎಲ್.ಉಮಾಪತಿ, ಆಲಗೂಡು ಶಿವಣ್ಣ, ಯಡದೊರೆ ಮಹದೇವಯ್ಯ, ಕನ್ನಹಳ್ಳಿ ಶಿವಕುಮಾರ್, ಮಹದೇವ, ಚೌಹಳ್ಳಿ ಸಿದ್ದರಾಜು, ದಕ್ಷಿಣಮೂರ್ತಿ ಇತರರು ಇದ್ದರು.