ಚನ್ನಪಟ್ಟಣ: ಕ್ಷೇತ್ರದ ಜನತೆ ನಿಖಿಲ್ ಕುಮಾರಸ್ವಾಮಿ ಬೆಂಬಲಿಸುವ ಮೂಲಕ ಪ್ರಧಾನಿ ಮೋದಿ ಮತ್ತು ಎಚ್.ಡಿ. ಕುಮಾರಸ್ವಾಮಿ ಕೈ ಬಲಪಡಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.
ತಾಲೂಕಿನ ಎಸ್.ಎಂ.ಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಜನರನ್ನು ಈ ಕಾಂಗ್ರೆಸ್ ಸರ್ಕಾರ ಸುಲಿಗೆ ಮಾಡುತ್ತಿದೆ. ಈ ಸರ್ಕಾರ ಇದ್ದರೆ ಜನರಿಗೆ ಒಳ್ಳೆಯದು ಆಗುವುದಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂದರು.
ಕಾಂಗ್ರೆಸ್‌ನಿಂದ ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಸಾಧ್ಯವಿಲ್ಲ. ನಿಖಿಲ್ ಕುಮಾರಸ್ವಾಮಿ ಗೆದ್ದರೆ, ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಹೋರಾಟ ನಡೆಸಿ ಮೇಕೆದಾಟು ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಾಡುವ ಕೆಲಸ ಅಚ್ಚುಕಟ್ಟಿನಿಂದ ಮಾಡಬೇಕು. ಜನರ ನಿರೀಕ್ಷೆ ತಲುಪುವಲ್ಲಿ ಇವು ವಿಫಲವಾಗಿವೆ. ಇವುಗಳನ್ನು ಬಹಳ ಕಾಲ ನಿಭಾಯಿಸಲು ಸಾಧ್ಯವಿಲ್ಲ. ಅಗ್ಗದ ಭರವಸೆಗಳನ್ನು ಕೊಟ್ಟು ಜನರ ಭಾವನೆಗಳ ಜತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರಕ್ಕೆ ಕೊಡುಗೆ ಏನು?
ಚಕ್ಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ನಿಖಿಲ್, ಎರಡು ಬಾರಿ ಕುತಂತ್ರದಿಂದ ಪೆಟ್ಟು ತಿಂದು ಮತ್ತೆ ನಿಮ್ಮನ್ನು ನಂಬಿ ಬಂದು ನಿಂತಿದ್ದೇನೆ. ಕ್ಷೇತ್ರಕ್ಕೆ ನಮ್ಮ ಕೊಡುಗೆ ಏನು ಎಂದು ಪ್ರಶ್ನಿಸುವ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಸಹೋದರ ಡಿ.ಕೆ ಸುರೇಶ್ ಮೂರು ಬಾರಿ ಸಂಸದರಾಗಿದ್ದರು, ಹಾಗಾದರೆ ಚನ್ನಪಟ್ಟಣಕ್ಕೆ ನಿಮ್ಮ ಸಹೋದರನ ಕೊಡುಗೆ ಏನು.? ಯೋಗೇಶ್ವರ್ 6 ವರ್ಷದ ಮೇಲೆ ಒಂದು ಪಕ್ಷದಲ್ಲಿ ಇರುವುದಿಲ್ಲ. ಅಂಥವುದರಲ್ಲಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಏನು ಪ್ರತಿನಿಧಿಸುತ್ತಾರೆ ಎಂದು ಡಿಕೆಸು ಹಾಗೂ ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದರು.
ಜನರ ಹೃದಯದಲ್ಲಿ ಸ್ಥಾನ
ಈ ಚುನಾವಣೆ ನನಗೆ ಅತ್ಯಂತ ಅನಿರಿಕ್ಷೀತ. ಇಡೀ ರಾಜ್ಯ ಸರ್ಕಾರ ನನ್ನನ್ನು ಸೋಲಿಸಲು ಕ್ಷೇತ್ರದಲ್ಲಿ ಬೀಡುಬಿಟ್ಟಿದೆೆ. ಈ ಹಿಂದಿನ ನನ್ನ ಎರಡು ಸೋಲು, ನನ್ನ ಸೋಲಲ್ಲ, ಜನ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ತಾಲೂಕಿನ ಎಲ್ಲ ಸಮುದಾಯದವರು ಮನೆಯ ಮಗ ಎಂದು ಆಶೀರ್ವಾದ ಮಾಡಿದ್ದಾರೆ. ನನ್ನ ತಾಯಂದಿರು ಮನಸ್ಸು ಮಾಡಿದರೆ ಚನ್ನಪಟ್ಟಣ ಬದಲಾವಣೆ ಮಾಡಬಹುದು. ನಾನು ಶಾಸಕನಾಗಬೇಕು ಎಂದು ಈ ಚುನಾವಣೆ ಎದುರಿಸುತ್ತಿಲ್ಲ. ನಿಮ್ಮ ಮನೆಯ ಮಕ್ಕಳು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ನನಗೆ ನನ್ನ ಜವಾಬ್ದಾರಿಯ ಅರಿವಿದೆ. ಪ್ರತಿಯೊಬ್ಬರ ಭವಿಷ್ಯ ರೂಪಿಸುವ ಕಾರಣಕ್ಕೆ ಈ ಚುನಾವಣೆಗೆ ಬಂದಿದ್ದೇನೆ. 13ರ ಚುನಾವಣೆಯಲ್ಲಿ ಕ್ರಮಸಂಖ್ಯೆ ಒಂದಕ್ಕೆ ಮತಹಾಕುವ ಮೂಲಕ ನನ್ನನ್ನು ಆಶೀರ್ವದಿಸಿ ಎಂದು ನಿಖಿಲ್ ಮನವಿ ಮಾಡಿದರು.
"ನಾನು ಕಾಡುಗೊಲ್ಲ ಮತ್ತು ಬೆಸ್ತ ಸಮುದಾಯಗಳನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಖಚಿತ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾಡುಗೊಲ್ಲ ಸಮುದಾಯವನ್ನು ಈ ಪ್ರವರ್ಗಕ್ಕೆ ಸೇರಿಸಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಚರ್ಚೆ ನಡೆಸಿದ್ದೇನೆ."
ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.
"ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಡವರು ಹಾಗೂ ರೈತರ ಬಂಧು. ರಾಜ್ಯದಲ್ಲಿ ಹಲವು ನಿರ್ಣಾಯಕ ಯೋಜನೆಗಳನ್ನು ಮುನ್ನಡೆಸುವಲ್ಲಿ ಗೌಡರ ಪಾತ್ರ ಅಪಾರವಾಗಿದೆ. ಇದರೊಂದಿಗೆ, ಕುಮಾರಸ್ವಾಮಿ ಅವರ ಕೊಡುಗೆ ಅಪಾರವಾಗಿದೆ. ಕ್ಷೇತ್ರದ ನೀರಾವರಿ ಯೋಜನೆಗಳು ಅದರಲ್ಲಿಯೂ ಸತ್ತೇಗಾಲ ಯೋಜನೆಗೆ ಒತ್ತು ನೀಡಿದ ಕೀರ್ತಿ ಅವರಿಗೆ ಸಲ್ಲಬೇಕು. ಕ್ಷೇತ್ರದ ಜನತೆ ನಿಖಿಲ್ ಗೆಲ್ಲಿಸಿದರೆ ಭವಿಷ್ಯ ಸುಖವಾಗಿರುತ್ತದೆ."
ಡಾ.ಅಶ್ವತ್ಥ ನಾರಾಯಣ್, ಮಾಜಿ ಡಿಸಿಎಂ
ಲೆಹರ್ ಸಿಂಗ್ ಪ್ರಚಾರ!
ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದರು. ಚಕ್ಕೆರೆ ಗ್ರಾಮದಲ್ಲಿ ಎಚ್.ಡಿ. ದೇವೇಗೌಡ ಹಾಗೂ ನಿಖಿಲ್ ಸಭೆಯಲ್ಲಿ ಭಾಗವಹಿಸಿದ ಅವರು, ಕ್ಷೇತ್ರ ಹಾಗೂ ದೇಶದ ಭವಿಷ್ಯಕ್ಕಾಗಿ ನಿಖಿಲ್ ಗೆಲ್ಲಿಸುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ತಾಲೂಕು ಬ್ರಾಹ್ಮಣ ಮಹಾಸಭಾ ಸೇರಿ ಹಲವು ಸಮುದಾಯ ಹಾಗೂ ಸಂಘ-ಸಂಸ್ಥೆಗಳು ಹಾಗೂ ವ್ಯಾಪಾರಿ ಪ್ರತಿನಿಧಿಗಳನ್ನು ಭೇಟಿ ಮಾಡಿ ನಿಖಿಲ್ ಪರ ಮತಯಾಚನೆ ನಡೆಸಿದರು.