ಜಿಲ್ಲೆ

ಮಕ್ಕಳು ಶಿಕ್ಷಣ, ಸಂಸ್ಕಾರ ಕಲಿಯುವುದು ಮುಖ್ಯ

ಸವಣೂರ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವಂತೆ ಮಕ್ಕಳು ಶಿಕ್ಷಣ, ಸಂಸ್ಕಾರ ಕಲಿಯುವುದು ಅತಿ ಮುಖ್ಯವಾಗಿದೆ ಎಂದು ಬಿಇಒ ಎಂ.ಎಫ್. ರ್ಬಾ ತಿಳಿಸಿದರು.

ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಸಮಖ್ಯಾ ಕರ್ನಾಟಕ ಸಹಯೋಗದಲ್ಲಿ ಬುಧವಾರ ಪಟ್ಟಣದ ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆ ಸಭಾ ಭವನದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಹಕ್ಕುಗಳ ಜತೆ ಕರ್ತವ್ಯಗಳು ಇರುವುದರಿಂದ ಎಲ್ಲರೂ ಅದನ್ನು ಪಾಲಿಸಬೇಕು. ಬಾಲ್ಯ ವಿವಾಹ ಎಂದರೇನು? ಬಾಲ್ಯ ವಿವಾಹಕ್ಕೆ ಕಾರಣಗಳು, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ಮಹಿಳಾ ಸಮಖ್ಯಾ ಕರ್ನಾಟಕ ಸಂಪನ್ಮೂಲ ವ್ಯಕ್ತಿ ಸುನಂದಾ ಚಿನ್ನಾಪೂರ ಉಪನ್ಯಾಸ ನೀಡಿ, ಬಾಲ್ಯ ವಿವಾಹ ಮುಕ್ತ ಭಾರತ ಮಾಡಲು ಮಕ್ಕಳ ಪಾತ್ರ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಗ್ಗೆ ಮಕ್ಕಳಲ್ಲಿ ಅರಿವು ಮತ್ತು ಜಾಗೃತಿ ತುಂಬಾ ಮುಖ್ಯವಾಗಿದೆ. ಬಾಲ್ಯ ವಿವಾಹದಂತ ಪ್ರಕರಣಗಳಲ್ಲಿ ಮಕ್ಕಳು ಸಿಲುಕಿ ಹಾಕಿಕೊಂಡು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ, ಹೆಣ್ಣು ಮಕ್ಕಳಿಗೆ 18 ವರ್ಷ ಗಂಡು ಮಕ್ಕಳಿಗೆ 21 ವರ್ಷ ಆಗುವವರೆಗೂ ಮದುವೆ ಮಾಡಿಕೊಳ್ಳದಂತೆ ಸಲಹೆ ನೀಡಿದರು.

ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ವಿ. ಅಡಿವೆಪ್ಪನವರ ಮಾತನಾಡಿದರು. ಶ್ರೀ ಚನ್ನಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯ ಗುರುಮಾತೆ ಸುಮಾ ಜೋಶಿ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ವಿಜಯಲಕ್ಷ್ಮಿ ಫಕೀರಸ್ವಾಮಿಮಠ, ಎಸ್​ಜಿಆರ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಜಯಾ ಕಲ್ಮಠ, ಪಂಚಾಕ್ಷರಿ ಹಲಸೂರು ಹಾಗೂ ಇತರರು ಪಾಲ್ಗೊಂಡಿದ್ದರು. ಸೌಮ್ಯ ಪಾಟೀಲ, ಕೆ. ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.