ಜಿಲ್ಲೆ

ಪ್ರಕೃತಿ ಉಳಿಸುವ ಹೊಣೆಗಾರಿಕೆ ಎಲ್ಲರದ್ದು

ಪ್ರಸಿನ್ ಕೆ.ಆರ್

ನಾಗಮಂಗಲ: ಗಿಡಗಳನ್ನು ನೆಡುವುದು ಪುಣ್ಯದ ಕೆಲಸ. ಇದು ಕೇವಲ ಗಿಡ ನೆಡುವ ಕಾರ್ಯಕ್ರಮವಾಗಬಾರದು. ಬದಲಿಗೆ ಪ್ರಕೃತಿಯನ್ನು ಸಂರಕ್ಷಿಸುವ ಹೊಣೆಗಾರಿಕೆಯಾಗಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಜಿ.ಪಂಡಿತ್ ಹೇಳಿದರು.

ಮಾತೃ ಫೌಂಡೇಷನ್ ಬೆಂಗಳೂರು, ಲೋಕಾಯುಕ್ತ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಾಗಮಂಗಲ, ಅರಣ್ಯ ಇಲಾಖೆ. ಎನ್‌ಎಸ್‌ಎಸ್ ಘಟಕದ ವತಿಯಿಂದ ತಾಲೂಕಿನ ಕಾಚೇನಹಳ್ಳಿ-ಅಂಕುಶಾಪುರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಮಾತೃಗೊಂದು ಮರ-ಸಹಸ್ರ ಸಹಸ್ರ ಗಿಡ ನೆಡುವ ಅಭಿಯಾನ-3 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್ ನಮ್ಮ ಜೀವನ ಅವಿಭಾಜ್ಯ ಅಂಗವಾಗಿದೆ. ಬಹುಪಾಲು ಪರಿಸರ ನಾಶಕ್ಕೆ ಪ್ಲಾಸ್ಟಿಕ್ ಬಳಕೆಯೇ ಕಾರಣ. ಪ್ರಕೃತಿ ಸಂರಕ್ಷಣೆಯ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಎಂದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ಯಾಂ ಪ್ರಸಾದ್ ಮಾತನಾಡಿ, ಎಲ್ಲರೂ ಕೈಜೋಡಿಸಿದರೆ ಉತ್ತಮ ಪರಿಸರ ಸಂರಕ್ಷಣೆಯಂತಹ ಉತ್ತಮ ಕೆಲಸ ಮಾಡಲು ಸಾಧ್ಯ. ಹಿರಿಯರ ಉತ್ತಮ ಮಾರ್ಗದರ್ಶನದೊಂದಿಗೆ ನಾವು ನಡೆದರೆ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇಂದ್ರೇಶ್ ಮಾತನಾಡಿ, ಕಳೆದ 30-40 ವರ್ಷದ ಹಿಂದೆ ಬಾವಿಯ ನೀರನ್ನು ಕುಡಿಯುತ್ತಿದ್ದೆವು. ಈಗ ಪರಿಸರ ಹಾಳಾಗುತ್ತಿರುವುದರಿಂದ ಹರಿಯುವ ನೀರನ್ನು ಸಹ ಕುಡಿಯಲು ಸಾಧ್ಯವಾಗುತ್ತಿಲ್ಲ. ಸಂವಿಧಾನದಲ್ಲಿರುವ ಮೂಲ ಕರ್ತವ್ಯದ ಕುರಿತು ಎಲ್ಲ ನಾಗರಿಕರಿಗೂ ಅರಿವಿರಬೇಕು ಎಂದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನಡಾಫ್ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಲು ಗಿಡ ಮರಗಳನ್ನು ನೆಟ್ಟು ಪೋಷಿಸುವ ಕೆಲಸವಾಗಬೇಕು. ಮನುಷ್ಯನಿಗೆ ಬೇಕಾದ ಗಾಳಿ ನೀರು ಬೆಳಕನ್ನು ಶುದ್ಧವಾಗಿಸಲು ಪರಿಸರವನ್ನು ಸಂರಕ್ಷಣೆ ಮಾಡೋಣ ಎಂದು ಕರೆ ನೀಡಿದರು.

ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಮಾತನಾಡಿ, ಇಂದಿನ ಕಾಲದ ಸಮಾಜದಲ್ಲಿರುವ ಒಳ್ಳೆಯದನ್ನು ನೋಡಬೇಕು. ಅಂತೆಯೇ ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ಉಪ ಲೋಕಾಯುಕ್ತ ಬಿ.ವೀರಪ್ಪ ಮಾತನಾಡಿ, ಹೆತ್ತ ತಾಯಿ ತಮ್ಮ ಮಕ್ಕಳನ್ನು 9 ತಿಂಗಳು ಮಾತ್ರ ಹೊಟ್ಟೆಯಲ್ಲಿ ಇಟ್ಟು ಪೋಷಿಸುತ್ತಾಳೆ. ಆದರೆ ಪ್ರಕೃತಿ ತಾಯಿ ನಾವು ಜೀವಂತವಾಗಿರುವವರೆಗೂ ತಮ್ಮ ಮಡಿಲಿನಲ್ಲಿ ಇಟ್ಟು ಪೋಷಿಸುವ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತಾಳೆ. ಪ್ರಕೃತಿ ಮಾತೆಯನ್ನು ಸಹ ನಾವು ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮೀನಾಕ್ಷಿ ನೇಗಿ ಮಾತನಾಡಿ, ಅರಣ್ಯ ಇಲಾಖೆಗೆ ನೂರಕ್ಕೂ ಹೆಚ್ಚು ವರ್ಷದ ಇತಿಹಾಸವಿದೆ. ನಮ್ಮ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಅರಣ್ಯ ಪ್ರದೇಶವಿದೆ.

6500ಕ್ಕೂ ಹೆಚ್ಚು ಆನೆಗಳಿವೆ. ಭಾರತದಲ್ಲೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಕರ್ನಾಟಕ. ಅರಣ್ಯ ಇಲಾಖೆಯ ಈ ಸಾಧನೆಯ ಹಿಂದೆ ಹಲವು ಅರಣ್ಯ ಅಧಿಕಾರಿಗಳ ಶ್ರಮವಿದೆ ಎಂದು ಹೇಳಿದರು.

ರಾಜ್ಯ ಗ್ರಾಹಕರ ಆಯೋಗದ ಅಧ್ಯಕ್ಷ ಟಿ.ಜಿ.ಶಿವಶಂಕರೇಗೌಡ, ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಜಿಲ್ಲಾ ಪ್ರಧಾನ ಮತ್ತು ಸೆಕ್ಷನ್ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ, ಜಿಲ್ಲಾಧಿಕಾರಿ ಡಾ.ಕುಮಾರ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಜು, ಲೋಕಾಯುಕ್ತ ಉಪನಿಬಂಧಕ ಎನ್.ವಿ.ಅರವಿಂದ್, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ, ರಾಜ್ಯ ಔಷಧ ಗಿಡಮೂಲಿಕೆ ಪ್ರಾಧಿಕಾರ ಡಾ.ಎಂ.ಜೆ.ಪ್ರಭು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.