ಹೊಳೆಹೊನ್ನೂರು: ಪ್ರತಿಯೊಬ್ಬರೂ ದಾನವನ್ನು ಮಾಡಲೇಬೇಕು. ಅಕ್ಕಪಕ್ಕದವರ ಯೋಗಕ್ಷೇಮ ನೋಡಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಇಲ್ಲಿನ ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ವಿದ್ವತ್ ಸಭೆಯಲ್ಲಿ ಪ್ರವಚನ ನೀಡಿದ ಶ್ರೀಗಳು, ಇಡೀ ಊರಿನ ಯೋಗಕ್ಷೇಮವನ್ನು ನೋಡುವ ಅಗತ್ಯ ಇಲ್ಲ. ಅದನ್ನು ರಾಜನಾದವನು ನೋಡಿಕೊಳ್ಳುತ್ತಾನೆ. ನಾವುಗಳು ನಮ್ಮ ಅಕ್ಕಪಕ್ಕದ ಜನರ ಯೋಗಕ್ಷೇಮ ನೋಡಲೇಬೇಕು. ಅವರ ಹಸಿವನ್ನು ನಾವು ಅರ್ಥಮಾಡಿಕೊಳ್ಳಲೇಬೇಕು. ಶಾಸ್ತ್ರವೇ ಇದನ್ನು ಹೇಳಿದೆ ಎಂದರು.
ಪ್ರತಿದಿನ ಒಂದು ಮುಷ್ಟಿ ಅಕ್ಕಿಯನ್ನು ತೆಗೆದಿಡಿ. ಅದನ್ನು ಯೋಗ್ಯರು, ಸಜ್ಜನರು, ಅರ್ಹರಾದವರಿಗೆ ಕೊನೆಗೆ ಹಂಚಿ. ಇದರಿಂದ ನೀವು ನಿತ್ಯವೂ ದಾನ ಮಾಡಿದ ಫಲವೂ ಬರುತ್ತದೆ. ಜತೆಗೆ ಕಷ್ಟದಲ್ಲಿ ಇದ್ದವರ ಯೋಗಕ್ಷೇಮವನ್ನೂ ನೀವು ನೋಡಿಕೊಂಡಂತಾಗುತ್ತದೆ ಎಂದು ಹೇಳಿದರು.
ಗೀತೆಯಲ್ಲಿ, ವೇದಗಳಲ್ಲಿ, ಶ್ರೀ ಮಧ್ವಾಚಾರ್ಯರು ಸೇರಿದಂತೆ ಎಲ್ಲರೂ ದಾನದ ಮಹತ್ವ ಹೇಳಿದ್ದಾರೆ. ಯಾರು ತಾನು ದುಡಿದದ್ದನ್ನು ತಾನು ಮಾತ್ರ ತಿನ್ನುತ್ತಾನೆಯೋ, ಯಾರಿಗೂ ಕೊಡದೆ ತಿನ್ನುತ್ತಾನೆಯೋ ಅವನು ಪಾಪ ಮಾಡಿದಂತೆಯೇ ಸರಿ. ಅದಕ್ಕಾಗಿಯೇ ಅತಿಥಿ, ಅಭ್ಯಾಗತರಿಗೆ ಅಷ್ಟು ಮಹತ್ವವನ್ನು ಶಾಸ್ತ್ರ ಹೇಳಿದೆ ಎಂದರು.
ಶ್ರೀ ಸತ್ಯಧರ್ಮ ತೀರ್ಥರ ಪಾದುಕಾರಾಧನೆಯ ನಿಮಿತ್ತ ಶ್ರೀ ಸತ್ಯಾತ್ಮ ತೀರ್ಥರಿಗೆ ಶ್ರೀ ಸತ್ಯಧರ್ಮರ ಶೇಷವಸ್ತ್ರವನ್ನು ಸಮರ್ಪಿಸಲಾಯಿತು. ಉತ್ತರಾದಿ ಮಠದ ದಿವಾನ್ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಬಾಳಗಾರು ಜಯತೀರ್ಥಾಚಾರ್ಯ, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಕಟ್ಟಿ, ಸಿ.ಪಿ.ವಾದಿರಾಜ ಇತರರಿದ್ದರು.
ಶ್ರೀಗಳ ಸೀಮೋಲ್ಲಂಘನ
ಹೊಳೆಹೊನ್ನೂರಿನ ಶ್ರೀ ಸತ್ಯಧರ್ಮ ತೀರ್ಥರ ಮೂಲ ಬೃಂದಾವನ ಸನ್ನಿಧಾನದಲ್ಲಿ ಜು.12ರಂದು ತಮ್ಮ 28ನೇ ಚಾತುರ್ಮಾಸ್ಯಕ್ಕೆ ಸಂಕಲ್ಪವನ್ನು ಮಾಡಿದ್ದ ಶ್ರೀ ಸತ್ಯಾತ್ಮ ತೀರ್ಥರು ಶುಕ್ರವಾರ ವ್ರತವನ್ನು ದೇವರಿಗೆ ಸಮರ್ಪಿಸಿ ಸೀಮೋಲ್ಲಂಘನೆ ಕೈಗೊಳ್ಳಲಿದ್ದಾರೆ. ಹೊಳೆಹೊನ್ನೂರಿನಿಂದ 8 ಕಿಮೀ ದೂರದಲ್ಲಿರುವ ತಳ್ಳಿಕಟ್ಟೆಯಲ್ಲಿರುವ ಶ್ರೀ ಸತ್ಯಧರ್ಮ ತೀರ್ಥರಿಗೆ ಸ್ವಪ್ನಲಬ್ಧವಾದ ಶ್ರೀ ಲಕ್ಷ್ಮೀ ರಂಗನಾಥನ ದರ್ಶನ ಪಡೆಯಲಿರುವ ಶ್ರೀಗಳು ತಮ್ಮ ಚಾತುರ್ಮಾಸ್ಯ ವ್ರತವನ್ನು ದೇವರ ಸನ್ನಿಧಾನದಲ್ಲಿ ಸಮಾಪನ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ ಹೊಳೆಹೊನ್ನೂರಿನಲ್ಲೇ ಸಂಸ್ಥಾನ ದೇವರ ಪೂಜೆ ಪೂರೈಸಿ ಮಧ್ಯಾಹ್ನದ 3 ಗಂಟೆಯ ಬಳಿಕ ತಳ್ಳಿಕಟ್ಟೆಗೆ ಭಕ್ತರೊಂದಿಗೆ ತೆರಳಲಿದರು.