ವಿರಾಜಪೇಟೆ: ಸಂವಿಧಾನವನ್ನು ಓದಿ ಅರ್ಥೈಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ನ ನಿವೃತ ನ್ಯಾ. ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಮಾನವ ಹಕ್ಕುಗಳ ಘಟಕ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಭಾರತದ ಸಂವಿಧಾನದ ಮೂಲಾಂಶಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಭಾರತವು ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವಕ್ಕೆ ದೇಶದ ಸಂವಿಧಾನವು ತಳಹದಿಯಾಗಿದ್ದು, ಸಂವಿಧಾನವನ್ನು ಓದದಿದ್ದರೆ ಕಾನೂನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕನ್ನು ನೀಡಿದ್ದು, ಸಾಮಾಜಿಕ ನ್ಯಾಯದ ಅಂಶಗಳನ್ನು ಎತ್ತಿ ಹಿಡಿದಿದೆ. ಪ್ರತಿಯೊಬ್ಬರೂ ದೇಶದ ಇತಿಹಾಸ, ಆರ್ಥಿಕ ಪರಿಸ್ಥಿತಿ, ಕಾನೂನು, ಹಕ್ಕುಗಳು, ರಾಜಕೀಯ ಅಂಶಗಳನ್ನು ಓದಿ ತಿಳಿಯಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೊಮಿನಿಕ್ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ದೇಶದ ಮೂಲಭೂತ ಕಾನೂನಾಗಿದೆ. ಅದನ್ನು ಅನುಸರಿಸಿ ಅದಕ್ಕೆ ಬದ್ಧರಾಗಿ ನಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಸಂವಿಧಾನದ ಆಶಯಗಳು ಸ್ವತಂತ್ರ, ನ್ಯಾಯ, ಸಮಾನತೆ, ಹಕ್ಕು, ಭ್ರಾತೃತ್ವ ವಾಗಿದ್ದು ವ್ಯಕ್ತಿ ಸ್ವಾತಂತ್ರ ಎಂಬುವುದು ಎಲ್ಲರಿಗೂ ಇದೆ. ಸಂವಿಧಾನದ ಮೂಲಾಂಶಗಳನ್ನು ಎಲ್ಲರೂ ಓದಬೇಕು. ಆಗ ಮಾತ್ರ ನಮ್ಮ ದೇಶದ ಕಾನೂನು ಹಾಗೂ ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಪದ್ಧತಿ ಅರಿಯಲು ಸಾಧ್ಯ ಎಂದರು.
ಕಾಲೇಜಿನ ಮಾನವ ಹಕ್ಕುಗಳ ಘಟಕದ ಸಂಚಾಲಕಿ ಶಶಿಕಲಾ, ಐಕ್ಯೂಎಸಿ ಸಂಚಾಲಕಿ ಹೇಮಾ ಇದ್ದರು. ಕನ್ನಡ ಪ್ರಾಧ್ಯಾಪಕ ಅರ್ಜುನ್, ಎನ್‌ಎಸ್‌ಎಸ್ ಅಧಿಕಾರಿ ಶಾಂತಿಭೂಷಣ್, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಚಿತ್ರ ಅಳವಡಿಸಲಾಗಿದೆ .