ಜಿಲ್ಲೆ

ದುಶ್ಚಟಕ್ಕೆ ಒಳಗಾದರೆ ಹೊರಬರಲು ಕಷ್ಟ: ಕುಲಸಚಿವೆ ಎಂ.ಕೆ ಸವಿತಾ ಎಚ್ಚರಿಕೆ

ಮೈಸೂರು: ಮದ್ಯ ಮತ್ತು ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಿ. ಒಂದು ಸಾರಿ ಈ ಚಟಕ್ಕೆ ಒಳಗಾದರೆ ಇದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇಡೀ ನಿಮ್ಮ ಬದುಕನ್ನೇ ನಾಶದ ಅಂಚಿಗೆ ಕರೆದುಕೊಂಡು ಹೋಗುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಎಂ.ಕೆ ಸವಿತಾ ಹೇಳಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುವರಾಜ ಕಾಲೇಜು ಸಹಯೋಗದಲ್ಲಿ ಯುವರಾಜ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಹದಿಹರಿಯದ ವಯಸ್ಸನ್ನು ದಾಟಿ ನೀವು ಮುಂದೆ ಹೋಗುತ್ತಿರುವುದರಿಂದ ಇದನ್ನು ಮಾಡಬೇಡಿ, ಅದನ್ನು ಮಾಡಬೇಡಿ ಎಂದು ಎಂದು ಹೇಳಿಸಿಕೊಳ್ಳಬೇಕಾದ ವಯಸ್ಸಲ್ಲ. ನಿಮಗೆ ನೀವೇ ಮನವರಿಕೆಯಾಗಿ ಪ್ರೇರೇಪಿತರಾಗಬೇಕು. ನಾವು ಯಾವ ಯಾವ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು, ಕಲಿಯಬೇಕು ಎಂಬುದನ್ನು ಮನಗಾಣುತ್ತಾ ಹೋಗುವಂತಹ ವಯಸ್ಸು ಇದು ಎಂದು ಹೇಳಿದರು.

ಯಾರಾದರೂ ಮದ್ಯ, ಡ್ರಗ್ಸ್ ವ್ಯಸನಿ ಹಾಗುತ್ತಿದ್ದಾರೆ ಎಂದರೆ ಸಾಕಷ್ಟು ಕಾರಣಗಳು ಇರುತ್ತದೆ. ನಾವು ಮಾಡುವಂತಹ ಸಹವಾಸಗಳು, ಹವ್ಯಾಸಗಳು, ನಮ್ಮಲ್ಲಿ ಬಹಳ ಪ್ರೇರೇಪಣೆಯಾಗಿರುತ್ತದೆ. ಯಾವುದನ್ನು ಕಣ್ಣಿನಲ್ಲಿ ನೋಡುತ್ತೀರಿ ಅದರಲ್ಲಿ ಒಳ್ಳೆಯದನ್ನು ಅರಿಸಿಕೊಳ್ಳುವುದಿಲ್ಲ, ಕೆಟ್ಟದ್ದನ್ನೇ ಮೊದಲು ಆರಿಸುವಲ್ಲಿ ಮುಂದಾಗುತ್ತಿರಾ. ಅದು ನಿಮ್ಮ ಮನಸ್ಸಿಗೆ ಬೇಗ ಅಂಟಿಕೊಳ್ಳುತ್ತಿದೆ ಎಂದು ಹೇಳಿದರು.

ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಿವಶಂಕರ್ ಮಾತನಾಡಿ, ಕೆಟ್ಟ ಚಟಗಳಿಗೆ ನೀವು ವ್ಯಸನ ಆಗಿದ್ದರೆ ನಿಮ್ಮ ಮೆದುಳು ಕೆಟ್ಟದ್ದನ್ನು ಮಾಡಿಸುತ್ತಾ ಹೋಗುತ್ತದೆ. ಹಾಗೆ ನಿಮ್ಮ ಹೊಟ್ಟೆಯು ಕೂಡ. ನೀವು ಒಳ್ಳೆ ಆಹಾರವನ್ನು ಸೇವಿಸುತ್ತಾ ಬಂದರೆ ಅದು ಕೂಡ ಉತ್ತಮ ಆರೋಗ್ಯವನ್ನು ಕೊಡುತ್ತದೆ. ಹಾಗಾಗಿ ಹೊಟ್ಟೆಯೂ ನಿಮ್ಮ ಇನ್ನೊಂದು ಮಿದುಳು ಆಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಮಾತನಾಡಿ, ಮೊದಲು ಆರೋಗ್ಯವೇ ಭಾಗ್ಯ ಎಂಬುವ ಆಗಿತ್ತು. ಈಗ ಆರೋಗ್ಯವೇ ಎಲ್ಲ ಎಂಬುದಾಗಿದೆ. ಆರೋಗ್ಯ ಇಲ್ಲದೇ ನಾವು ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಮಾನಸಿಕ, ದೈಹಿಕ, ಆಧ್ಯಾತ್ಮಿಕ, ಆರೋಗ್ಯವಾಗಿ ಇರಬೇಕು. ವಿದ್ಯಾರ್ಥಿಗಳು ಎಷ್ಟೇ ಬುದ್ದಿವಂತರಾಗಿದ್ದರೂ ಯಾವುದರೂ ಚಟಕ್ಕೆ ಒಳಗಾದರೆ, ನೀವೂ ಮಾಡುವಂತಹ ಕಾರ್ಯಗಳು ಕೆಟ್ಟದಾಗಿ ಇರುತ್ತದೆ ಎಂದರು.

ಕೆ.ಆರ್.ಆಸ್ಪತ್ರೆ ಮನೋರೋಗ ತಜ್ಞ ಡಾ.ಬಿ.ಎನ್.ರವೀಶ ದುಶ್ಚಟಗಳಿಂದ ಆಗುವ ದುಷ್ಪರಿಣಾಮ ಕುರಿತು ತಿಳಿಸಿಕೊಟ್ಟರು. ಪರ್ತಕರ್ತ ಎಸ್.ಟಿ ರವಿಕುಮಾರ್ ಮಾತನಾಡಿದರು. ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹಾದೇವ ಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಅಜಯ್ ಕುಮಾರ್ ಇತರರು ಇದ್ದರು.