ಜಿಲ್ಲೆ

ನಕಲಿ ರೈತರಿಗೆ ಬೋನಫೈಡ್​​ ಕೊಟ್ಟಿರುವುದು ದೃಢ

ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಸಾಬೀತು : ಈ ವಾರದಲ್ಲಿ ವರದಿ ಸಲ್ಲಿಕೆ, ನಂತರ ಎ್​ಐಆರ್​

ಬೆಂಗಳೂರು/ಕೋಲಾರ: ಯಾರದ್ದೋ ಕೃಷಿ ಜಮೀನಿಗೆ ಇನ್ಯಾರ ಹೆಸರಿನಲ್ಲೋ ನಕಲಿ "ಬೋನಫೈಡ್​ ಸರ್ಟಿಫಿಕೇಟ್​'ಗಳನ್ನು ಸೃಷ್ಟಿಸಿಕೊಡುವ ಮೂಲಕ ಕೃಷಿ ಬಳಕೆಯ ಹೆಸರಿನಲ್ಲಿ ವಾಹನಗಳ ನೋಂದಣಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ರಸ್ತೆ ತೆರಿಗೆ ವಂಚನೆ ಮಾಡಿರುವ ವಿಚಾರ ಲೋಕಾಯುಕ್ತ ಪೊಲೀಸರ ತನಿಖೆಯಲ್ಲೂ ದೃಢಪಟ್ಟಿದೆ. ಈ ವಾರದಲ್ಲೇ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದು, ನಂತರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17 (ಎ) ಅನ್ವಯ ಲೋಕಾಯುಕ್ತ ನ್ಯಾಯಮೂರ್ತಿಗಳ ಅನುಮತಿ ಪಡೆದು ಎಫ್​ಐಆರ್​ ದಾಖಲಿಸಲಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಟ್ಟ, ಬಾಗೇಪಲ್ಲಿ ಸೇರಿ ಬೇರೆಬೇರೆ ತಾಲೂಕಿನ ವ್ಯಕ್ತಿಗಳಿಗೆ ಕೋಲಾರ ಜಿಲ್ಲೆ ನರಸಾಪುರ ನಾಡಕಚೇರಿಯೊಂದರಲ್ಲೇ ನಕಲಿ ಬೋನಫೈಡ್ ಸರ್ಟಿಫಿಕೇಟ್​ಗಳನ್ನು ಮಾಡಿಕೊಡಲಾಗಿದೆ. ನಂತರ ಇದೇ ಸರ್ಟಿಫಿಕೇಟ್​ಗಳನ್ನು ಬಳಸಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಕೆಜಿಎಫ್​​ ಆರ್​ಟಿಒಗಳಲ್ಲಿ ಅಕ್ರಮವಾಗಿ ವಾಹನಗಳನ್ನು ನೋಂದಣಿ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆನ್​ 7(2) ಮತ್ತು 9(ಎ) ಪ್ರಕಾರ ಸುಮೋಟೋ ಕೇಸ್​ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಕೋಲಾರ ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ್​ ನೇತೃತ್ವದ ತಂಡ ಆರ್​ಟಿಒ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ದಾಖಲಾತಿಗಳನ್ನು ಪಡೆದು ಪರಿಶೀಲನೆ ನಡೆಸಿದೆ. ಸರ್ಟಿಫಿಕೇಟ್​ ವಿತರಿಸಿರುವ ಸಮಯ, ವಾಹನ ನೋಂದಣಿಯಾದ ದಿನಾಂಕ, ಸರ್ವೇ ನಂಬರ್​ ಹಾಗೂ ಅದರಲ್ಲಿರುವ ವ್ಯಕ್ತಿಗಳ ಹೆಸರುಗಳನ್ನು ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಸಿ ಕಚೇರಿಯಿಂದ ಕೆಲವೊಂದು ದಾಖಲಾತಿಗಳು ಇನ್ನಷ್ಟೇ ಬರಬೇಕಿದೆ. ದಾಖಲಾತಿಗಳು ತನಿಖಾಧಿಕಾರಿಗಳ ಕೈ ಸೇರಿದ ನಂತರ ವರದಿ ಸಿದ್ಧಪಡಿಸಿ, ಲೋಕಾಯುಕ್ತ ಕಚೇರಿಗೆ ಸಲ್ಲಿಸಲಿದ್ದಾರೆ. ಅಕ್ರಮ ನಡೆದಿರುವುದು ದೃಢಪಟ್ಟಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳಾಗಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17 (ಎ) ಪ್ರಕಾರ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಿದ್ದಾರೆ.

ವಿಜಯವಾಣಿ ವರದಿ ಆಧರಿಸಿ ಸುಮೋಟೋ
ಕಂದಾಯ ಸಚಿವ ಕೃಷ್ಣಬೈರೇಗೌಡರ ಜಮೀನು ಸೇರಿ ಕೋಲಾರ ಜಿಲ್ಲೆ ಗ್ರಾಮಗಳ ವಿವಿಧ ಸರ್ವೇ ನಂಬರ್​ಗಳ ಜಮೀನುಗಳಿಗೆ ನಕಲಿ ರೈತರಿಗೆ ಬೋನಫೈಡ್​ ಸರ್ಟಿಫಿಕೇಟ್​ಗಳನ್ನು ವಿತರಿಸಿರುವ ಬಗ್ಗೆ ವಿಜಯವಾಣಿ ಸರಣಿ ತನಿಖಾ ವರದಿಗಳನ್ನು ಪ್ರಕಟಿಸಿತ್ತು. ಜೂ.1ರಂದು "ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ' ಶೀರ್ಷಿಕೆಯಡಿ ಪ್ರಕಟವಾದ ವರದಿಯನ್ನು ಗಮನಿಸಿದ್ದ ಉಪ ಲೋಕಾಯುಕ್ತ ಕೆ.ಎನ್​.ಣೀಂದ್ರ ಅವರು ಸುಮೋಟೋ ಕೇಸ್​ ದಾಖಲಿಸಿಕೊಂಡು 1 ತಿಂಗಳಲ್ಲಿ ತನಿಖಾ ವರದಿ ನೀಡಲು ಆದೇಶಿಸಿದ್ದರು.

ಎಲ್ಲಿ ವಿತರಣೆ, ಎಲ್ಲೆಲ್ಲಿ ನೋಂದಣಿ?
  • ಕೋಲಾರದ ನರಸಾಪುರ ನಾಡಕಚೇರಿ ಒಂದರಲ್ಲೇ ವಿತರಣೆಯಾಗಿರುವ ಬೋನಫೈಡ್​ ಸರ್ಟಿಫಿಕೇಟ್​ಗಳ ವಿತರಣೆ.
  • 2022&23ರ ಅವಧಿಯಲ್ಲೇ ಸಾವಿರಾರು ನಕಲಿ ಬೋನಫೈಡ್​ ಸರ್ಟಿಫೀಕೇಟ್​ಗಳ ವಿತರಿಸಲಾಗಿದೆ.
  • ಬರೀ 2 ತಿಂಗಳಲ್ಲಿ 500ಕ್ಕೂ ಹೆಚ್ಚು ಟ್ರ್ಯಾಕ್ಟರ್​​, ಟ್ರಾಲಿ ಸೇರಿ ಇನ್ನಿತರ ಯಂತ್ರೋಪಕರಣಗಳು ಕೃಷಿಕರ ಹೆಸರಿನಲ್ಲಿ ನೋಂದಣಿ.
  • ಕೋಲಾರ, ಚಿಕ್ಕಬಳ್ಳಾಪುರ, ಕೆಜಿಎ್​, ಚಿಂತಾಮಣಿ ಹಾಗೂ ಬೆಂಗಳೂರಿನ ಕೆಲ ಆರ್​ಟಿಒಗಳಲ್ಲಿ ನೋಂದಣಿ.
  • ಕೆಜಿಎಫ್​ ಆರ್​ಟಿಒದಲ್ಲೇ 8000ಕ್ಕೂ ಅಧಿಕ ಟ್ರಾಕ್ಟರ್​ ಮತ್ತು ಟ್ರಾಲಿಗಳು ನೋಂದಣಿಯಾಗಿರುವ ಮಾಹಿತಿ.

ಅರುಣಾಚಲ ಪ್ರದೇಶಕ್ಕೆ ವಿಶೇಷ ತಂಡ
ಇದೇ ವೇಳೆ ಕೋಲಾರ ಆರ್​ಟಿಒ ಕಚೇರಿಯಲ್ಲಿ ನಡೆದಿರುವ ಅಕ್ರಮ ಬಸ್​ಗಳ ನೋಂದಣಿ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರದ ಆವಲಹಳ್ಳಿ ಠಾಣೆ ಪೊಲೀಸರ 1 ತಂಡ ಅರುಣಾಚಲ ಪ್ರದೇಶಕ್ಕೆ ಹೋಗಿದೆ. ನಾಲ್ಕೈದು ದಿನದಲ್ಲಿ ವಾಪಸಾಗಲಿದೆ. ಅಕ್ರಮ ಬಸ್​ಗಳ ನೋಂದಣಿ ದಂಧೆಯಲ್ಲಿ ಆರ್​ಟಿಒ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಟೀ ಕೊಡುವ ಕೆಲಸ ಮಾಡುವ, ಮೋಟಾರು ವಾಹನ ನಿರೀಕರ ಬಂಟನಾಗಿರುವ ವ್ಯಕ್ತಿ ಹಾಗೂ ಗೂಡ್ಸ್​ ವಾಹನಗಳ ನೋಂದಣಿ ಜಾಲದಲ್ಲಿ ಬಸ್​ ಮಾಲೀಕನೂ ಆಗಿರುವ ಜ್ಹೆರಾಕ್ಸ್​ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಬಂಧಿತ ಏಜೆಂಟ್​ ನವೀನ್​ ಜತೆ ಇವರಿಬ್ಬರ ಸಂಪರ್ಕವಿತ್ತು ಎನ್ನಲಾಗಿದೆ.


ಕೊನೆಗೂ ಎಸ್​ಡಿಎ, ಎಫ್​​ಡಿಎ ಎತ್ತಂಗಡಿ

ಕೋಲಾರ ಆರ್​ಟಿಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ಜೆ.ವಿ.ಶ್ರೀನಿವಾಸ್​ ಹಾಗೂ ದ್ವೀತಿಯ ದರ್ಜೆ ಸಹಾಯಕ ಪ್ರಕಾಶ್​ರನ್ನು ಕೊನೆಗೂ ಸಾರಿಗೆ ಇಲಾಖೆ ಎತ್ತಂಗಡಿ ಮಾಡಿದೆ. ಶ್ರೀನಿವಾಸ್​ರನ್ನು ಕೆಎಸ್​ಟಿಎಟಿಗೆ ಹಾಗೂ ಪ್ರಕಾಶ್​ರನ್ನು ಆಯುಕ್ತರ ಕಚೇರಿಗೆ ವರ್ಗಾವಣೆಗೊಳಿಸಿ ಮಂಗಳವಾರ ಆದೇಶಿಸಿದೆ. ಶ್ರೀನಿವಾಸ್​ ಕಳೆದ 10 ವರ್ಷದಿಂದ ಕೇಸ್​ ವರ್ಕರ್​ ಆಗಿ ಹಾಗೂ ಪ್ರಕಾಶ್​ ಕ್ಯಾಶಿಯರ್​ ಆಗಿ 20 ವರ್ಷದಿಂದ ಕೋಲಾರ ಆರ್​ಟಿಒ ಕಚೇರಿಯಲ್ಲೇ ತಳವೂರಿದ್ದರು. ಇದೀಗ ನಕಲಿ ಬೋನೈಡ್​ ಹಾಗೂ ಅಕ್ರಮ ನೋಂದಣಿ ಪ್ರಕರಣದಲ್ಲಿ ವರ್ಗಾವಣೆಗೊಳಿಸಿದೆ.

ನಕಲಿ ರೈತರಿಗೆ ಬೋನಫೈಡ್​ ಸರ್ಟಿಫಿಕೇಟ್​ಗಳನ್ನು ವಿತರಿಸಿರುವುದು ಈವರೆಗಿನ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಡಿಸಿ ಕಚೇರಿಯಿಂದ ಕೆಲ ದಾಖಲಾತಿಗಳನ್ನು ಕೇಳಿದ್ದು, ಬಂದ ನಂತರ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಲಾಗುತ್ತದೆ. ಸದ್ಯ ನರಸಾಪುರ ನಾಡಕಚೇರಿಯಲ್ಲಿ ವಿತರಣೆಯಾಗಿರುವ ಬೋನಫೈಡ್​ ಸರ್ಟಿಫಿಕೇಟ್​ಗಳನ್ನಷ್ಟೇ ಕೇಂದ್ರೀಕರಿಸಿ ತನಿಖೆ ಮಾಡಲಾಗುತ್ತಿದೆ ಬಿ.ಕೆ.ಉಮೇಶ್​, ಎಸ್ಪಿ, ಲೋಕಾಯುಕ್ತ ಕೋಲಾರ