ಮುಂಡರಗಿ ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶುಕ್ರವಾರ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಪ್ರವಚನದಲ್ಲಿ ಶ್ರೀಶರಣಬಸವ ಸ್ವಾಮೀಜಿ ಮಾತನಾಡಿದರು. ಶ್ರೀನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಇದ್ದರು. 
ಜಿಲ್ಲೆ

ಅರಿವಿನ ಮೂಲ ಬೆಳಕೇ ಇಷ್ಟಲಿಂಗ

ಸೋಮನಾಥ ರೆಡ್ಡಿ

ಮುಂಡರಗಿ: ಇಷ್ಟಲಿಂಗ ಇದ್ದಾಗ ಮಾತ್ರ ಶಿವಯೋಗ ಮಾಡಲು ಸಾಧ್ಯ. ಶಿವಯೋಗಕ್ಕೆ ಇಷ್ಟಲಿಂಗ ಅಗತ್ಯ. ಅರಿವಿನ ಮೂಲ ಬೆಳಕೇ ಇಷ್ಟಲಿಂಗ. ಮನುಷ್ಯನೊಳಗಿರುವ ದುರ್ಗುಣಗಳನ್ನು ತೆಗೆಯಲು ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು. ಇಷ್ಟಲಿಂಗವನ್ನು ನಿಷ್ಠೆಯಿಂದ ಪೂಜಿಸಿದರೆ ಅಕಾಲಿಕ ತೊಂದರೆಗಳು ಬರುವುದಿಲ್ಲ ಎಂದು ಬೆಳವಿ ವಿರಕ್ತಮಠದ ಶ್ರೀಶರಣಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶುಕ್ರವಾರ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಪ್ರವಚನದಲ್ಲಿ ಅವರು ಮಾತನಾಡಿದರು.

ನಿರ್ಮಲ ಭಕ್ತಿಯ ಮೂಲಕ ಇಷ್ಟಲಿಂಗ ಪೂಜೆ ಸಲ್ಲಿಸಬೇಕು. ಬಸವಣ್ಣನವರು ಇಷ್ಟಲಿಂಗವನ್ನು ನೀಡಿದ್ದಾರೆ. ಅಂಗೈಯಲ್ಲಿ ಇಷ್ಟಲಿಂಗವಿದ್ದರೆ ಶಿವಯೋಗ ಸಾಧನೆ ಸಾಧ್ಯ ಎಂದರು.

ಶ್ರೀನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಭಾರತ ಯೋಗಗಳ ತವರು ಮನೆ. ಭಾರತಕ್ಕೆ ದೊಡ್ಡ ಪರಂಪರೆ ಇದೆ. ಜಗತ್ತಿನ ಮೊಟ್ಟಮೊದಲ ಯೋಗಿ ಆದಿ ಶಿವಯೋಗಿ. ಆನಂತರ ಅನೇಕ ಯೋಗಗಳು ಪ್ರಾರಂಭವಾದವು. ಪತಂಜಲಿ ಯೋಗ ಕೇವಲ ದೈಹಿಕ ಯೋಗ. ದೈಹಿಕ ಯೋಗ ಮೀರಿ ಬಂದ ಯೋಗವೇ ರಾಜಯೋಗ. ದೇಹದೊಳಗಿನ ಮನಸ್ಸಿಗೆ, ಆತ್ಮಕ್ಕೆ ಸಂಸ್ಕಾರ ಕೊಡದಿದ್ದರೆ ದೇಹ ಕ್ರೂರಿಯಾಗುತ್ತದೆ ಎಂದರು.

ಮೊದಲು ದೈಹಿಕ ಯೋಗ, ಮಾನಸಿಕ ಯೋಗ ಮಾತ್ರ ಇತ್ತು. ಆತ್ಮ, ಪರಮಾತ್ಮನನ್ನು ಕೂಡಿಕೊಳ್ಳುವ ಬಗೆ ಇರಲಿಲ್ಲ. ಶರಣರು ದೈಹಿಕ ಯೋಗವನ್ನು ಸತ್ಯಶುದ್ಧ ಕಾಯಕದಲ್ಲಿ ಕಂಡರು. ಮನಸಿಗೆ ಬೇಕಾಗಿದ್ದು ಶಿವಾನುಭವ. ಆತ್ಮಕ್ಕೆ ಬೇಕಾಗಿರುವಂತದ್ದು ಶಿವಯೋಗವನ್ನು ತಂದರು. ಆತ್ಮಕ್ಕೆ ಸಂಸ್ಕಾರ ಕೊಡುವುದೆ ಶಿವಯೋಗ, ಇದನ್ನು ಬಸವಣ್ಣನವರು ತಂದರು. ಶಿವಯೋಗದಿಂದ ತನು, ಮನ, ಭಾವ ಶುದ್ಧಿಯಾಗುತ್ತದೆ. ಜಾತಿ, ಮತ, ಪಂಥ ಬಿಟ್ಟು ಇಷ್ಟಲಿಂಗ ಪೂಜಿಸಬೇಕು ಎಂದರು.