ಉಪ್ಪಿನಬೆಟಗೇರಿ: ಗ್ರಾಮದ ಎಸ್ಜಿವಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಜರುಗಿದ ಮಕ್ಕಳ ಗ್ರಾಮ ಸಭೆಯಲ್ಲಿ ಕೇವಲ ನಾಲ್ವರು ಅಧಿಕಾರಿಗಳು ಹಾಜರಿದ್ದ ಪರಿಣಾಮ ಮಕ್ಕಳ ಸಮಸ್ಯೆಗಳು ಹಾಗೆ ಉಳಿದವು. ಮಹಿಳಾ ಮತ್ತು ಮಕ್ಕಳ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ರಕ್ಷಣಾ ಇಲಾಖೆ ಹೊರತುಪಡಿಸಿ ಇನ್ನುಳಿದ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಗೈರಾಗಿದ್ದರು.
ಸಭೆಯುದ್ದಕ್ಕೂ ಆಧಾರ ಕಾರ್ಡ್ ತಿದ್ದುಪಡಿಯದ್ದೇ ಸದ್ದು ಜೋರಾಗಿತ್ತು. ವಿದ್ಯಾರ್ಥಿಗಳು ಶಾಲಾ ದಾಖಲಾತಿ, ಸ್ಕಾಲರ್ಶಿಪ್ ಹಾಗೂ ಇತರ ಕೆಲಸಗಳಿಗೆ ಆಧಾರ ಕಾರ್ಡ್ ಅವಶ್ಯವಿದ್ದು, ಅದರ ತಿದ್ದುಪಡಿಗಾಗಿ ಪರಸ್ಥಳಕ್ಕೆ ತೆರಳುವ ಅನಿವಾರ್ಯತೆಯಿದೆ. ಕೂಡಲೆ ಆಧಾರ ಕೇಂದ್ರವನ್ನು ಗ್ರಾಮದಲ್ಲಿ ಸ್ಥಾಪಿಸುವಂತೆ ಒಕ್ಕೊರಲಿನ ಒತ್ತಾಯ ಕೇಳಿ ಬಂದಿತು.
ಗ್ರಾಮದ ಎಸ್ಜಿವಿ ಹೈಸ್ಕೂಲ್ ಮೈದಾನ ಹೊರತುಪಡಿಸಿ ಹನುಮನಾಳ, ಹನುಮನಕೊಪ್ಪ ಸೇರಿ ಸ್ಥಳೀಯ ಸುಮಾರು 6 ಶಾಲೆಗಳಿಗೆ ಆಟದ ಮೈದಾನವಿಲ್ಲ. ನಮ್ಮ ಕ್ರೀಡಾ ಚಟುವಟಿಕೆ ನಡೆಸಲು ಮೈದಾನದ ಅನುಕೂಲ ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಗ್ರಾಮದಲ್ಲಿರುವ ಹೈಸ್ಕೂಲ್ ಮತ್ತು ಕಾಲೇಜ್ ಹೊರತುಪಡಿಸಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಕ್ರೀಡೆಗೆ ತರಬೇತಿ ನೀಡಲು ಕೂಡಲೆ ಎಲ್ಲ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸ್ಥಗಿತಗೊಂಡಿರುವ ಭೋಜನಾಲಯವನ್ನು ಕೂಡಲೇ ಆರಂಭಿಸಬೇಕು. ಆರೋಗ್ಯ ಇಲಾಖೆಯವರು ಎಲ್ಲ ಶಾಲೆಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ನೀಡಬೇಕು. ಎಸ್ಜಿವಿ ಪ್ರೌಢ ಶಾಲೆಯ ಕಾಂಪೌಂಡ್ ಪಕ್ಕದ ಗಟಾರಿನಲ್ಲಿ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಬೀರುತ್ತಿದ್ದು, ಅದನ್ನು ಸ್ವಚ್ಛಗೊಳಿಸಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಶೌಚಗೃಹ ವ್ಯವಸ್ಥೆ ಮಾಡಬೇಕು. ಕಸ ವಿಲೇವಾರಿ ಸೇರಿ ಹತ್ತು ಹಲವು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಸಭೆಯಲ್ಲಿ ಕೇಳಿದರು. </p><p>ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ರೇಣುಕಾ ಅಸುಂಡಿ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ, ಅಂಗನವಾಡಿಯಲ್ಲಿ ದೊರಕುವ ಸೌಲಭ್ಯಗಳ ಕುರಿತು ಮಾತನಾಡಿದರು. ಮಕ್ಕಳ ರಕ್ಷಣಾ ಘಟಕದ ಜಯಶ್ರೀ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳು, ಮಕ್ಕಳ ಕಳ್ಳ ಸಾಕಾಣಿಕೆ ಸೇರಿ ದೈಹಿಕ ಹಲ್ಲೆಗಳು ನಡೆದರೆ ಅದಕ್ಕೆ ಸಹಾಯವಾಣಿ ಸಂಖ್ಯೆ 112 ಕರೆ ಮಾಡಿ ಸಮಸ್ಯೆಗೆ ಹೇಳಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷ ಬಸೀರಅಹ್ಮದ ಮಾಳಗಿಮನಿ ಮಾತನಾಡಿ, ಸಭೆಯಲ್ಲಿ ಮಕ್ಕಳು ತಮ್ಮ ಸಾಕಷ್ಟು ಸಮಸ್ಯೆಗಳನ್ನು ಹೇಳಿಕೊಂಡಿದ್ದು, ನಮ್ಮ ವ್ಯಾಪ್ತಿಗೆ ಬರುವ ಕಾರ್ಯಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು. ಬೇರೆ ಇಲಾಖೆಗಳಿಂದ ದೊರಕಬೇಕಾದ ಸೌಲಭ್ಯಗಳನ್ನು ಅಯಾ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಹೈಸ್ಕೂಲ್ ವಿದ್ಯಾರ್ಥಿನಿ ರೇಣುಕಾ ಗುಜನಟ್ಟಿ ಅಧ್ಯಕ್ಷತೆ ಹಾಗೂ ವಿದ್ಯಾರ್ಥಿ ಅಮೃತ ಸವದತ್ತಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ನೋಡಲ್ ಅಧಿಕಾರಿಯಾಗಿ ದೀಪಕ ಕುಲಕರ್ಣಿ ಆಗಮಿಸಿದ್ದರು. ಕಾರ್ಯದರ್ಶಿ ವಿ.ಬಿ. ಹಂದೂರ, ಗ್ರಾಪಂ ಉಪಾಧ್ಯಕ್ಷೆ ಛಾಯಾ ಹೆಗಡೆ, ಸರ್ವ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿರೂಪಾಕ್ಷಪ್ಪ ಬಮ್ಮಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.