ಜಿಲ್ಲೆ

ಫಲಾನುಭವಿಗಳನ್ನು ಅಲೆದಾಡಿಸದೆ ಹಕ್ಕುಪತ್ರ ನೀಡಿ

ತುಮಕೂರು ಡೆಸ್ಕ್

 ಗುಬ್ಬಿ: ಫಲಾನುಭವಿಗಳನ್ನು ಅಲೆದಾಡಿಸದೆ ಬಗರ್​ಹುಕುಂ ಹಕ್ಕುಪತ್ರ ನೀಡಬೇಕು. ಯಾವುದೇ ಕಾರಣಕ್ಕೂ ರೈತರಿಂದ ಹಣಕ್ಕೆ ಬೇಡಿಕೆ ಇಡಬಾರದು ಎಂದು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಬಗರ್​ ಹುಕುಂ ಸಮಿತಿ ಅಧ್ಯಕ್ಷ, ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಸೂಚಿಸಿದರು.

ತಾಲೂಕು ಕಚೇರಿಯ ಕೋರ್ಟ್​ಹಾಲ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಗರ್​ ಹುಕ್ಕುಂ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ, ರೈತರಿಂದ ಹಣ ಪಡೆಯದೆ ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದರು.

2016ರಿಂದ ಇಲ್ಲಿಯವರೆಗೆ ಬಗರ್​ ಹುಕ್ಕುಂ ಸಮಿತಿ ಸಭೆ ಗುರುವಾರ ನಡೆಸಿದ್ದು, ಆರು ವರ್ಷದ ಹಿಂದೆ ತಾಲೂಕಿನಲ್ಲಿ ಸಭೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ನಾನೇ ಶಾಸಕನಾಗಿದ್ದಾಗ ಅರ್ಜಿಗಳನ್ನು ಪಡೆಯಲಾಗಿತ್ತು. ಗುಬ್ಬಿ ತಾಲೂಕಿನ ಸಿ.ಎಸ್​.ಪುರ ಹಾಗೂ ಕಡಬ ಹೋಬಳಿಯ ಒಟ್ಟು 7 ಪಂಚಾಯಿತಿಗಳು ತುರುವೇಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವುದರಿಂದ ಸಮಿತಿಯ ಸಭೆ ಕರೆಯಲಾಗಿದೆ. ಒಟ್ಟು 11 ಅರ್ಜಿಗಳನ್ನು ಮೊದಲ ಸಭೆಯಲ್ಲಿ ಸಮಿತಿಯ ಸರ್ವಾನುಮತದಿಂದ ಅನುಮೋದನೆ ಪಡೆಯಲಾಗಿದೆ. ಎರಡನೇ ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಹಾಗೂ ತಹಸೀಲ್ದಾರ್​ ಸ್ಥಳಪರಿಶೀಲನೆ ನಡೆಸಿದ ಬಳಿಕ ಮತ್ತೊಂದು ಸಭೆ ಕರೆದು ಸಾಧಕ&ಬಾಧಕಗಳನ್ನು ಚರ್ಚಿಸಿ, ಸಭೆಯ ತೀಮಾರ್ನವನ್ನು ಪ್ರಸ್ತಾಪಿಸಲಾಗುವುದು. ಈ ಭಾಗದ ರೈತರು 10&20 ಗುಂಟೆ ಉಳ್ಳವರಷ್ಟೇ ಇರುವ ಕಾರಣ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ ಹಾಗಾಗಿ ಸಾಗುವಳಿ ಚೀಟಿ ವಿತರಣೆ ಮಾಡುವ ನಿಟ್ಟಿನಲ್ಲಿ ಕೂಲಂಕುಷವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕರು ಹೇಳಿದರು. ಸಮಿತಿ ಸದಸ್ಯರಾದ ಆರ್​.ನಂಜುಂಡಪ್ಪ, ಟಿ.ಎಚ್​.ಗುರುದತ್​, ವಿನೋದ, ಕಡಬ ಉಪ ತಹಸೀಲ್ದಾರ್​ ವರುಣ್​, ಕಂದಾಯ ನಿರೀಕ್ಷಕ ರಾಜಶೇಖರ್​, ಸಿ.ಎಸ್​.ಪುರ ಕಂದಾಯ ನಿರೀಕ್ಷಕಿ ಪ್ರಮೀಳಾ ಇದ್ದರು.

ಮಧ್ಯವರ್ತಿಗಳ ಬಳಿ ಹೋಗದಿರಿ:

ಇಪ್ಪತ್ತು ವರ್ಷಗಳಿಂದ ಉಳುಮೆ ಚೀಟಿಗಳನ್ನು ವಿತರಿಸಲಾಗುತ್ತಿದೆ. ಯಾವುದೇ ಫೈಲ್​ಗಳನ್ನೂ ಹೊರಗೆ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಮಿತಿಯಲ್ಲಿ ಮಧ್ಯವರ್ತಿಗಳ ಆಟ ನಡೆಯುವುದಿಲ್ಲ. ಯಾವುದೇ ರೈತರು ಮಧ್ಯವರ್ತಿಗಳಿಗೆ ಆಗಲಿ, ಅಧಿಕಾರಿಗಳಿಗೆ ಹಣ ನೀಡಬಾರದು. ಕಾನೂನಿನ ಚೌಕಟ್ಟಿನಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಈ ಹಿಂದೆ ಅರ್ಜಿ ಸಲ್ಲಿಸಿರುವ ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದ ಶಾಸಕರು, ಪರಿಶೀಲಿಸಿ, ಕ್ರಮವಹಿಸುವಂತೆ ತಹಸೀಲ್ದಾರ್​ ಬಿ.ಆರತಿಗೆ ಸೂಚಿಸಿದರು.

ಬಯೋಮೆಟ್ರಿಕ್​ ಕಡ್ಡಾಯ

ತಹಸೀಲ್ದಾರ್​ ಆರತಿ ಮಾತನಾಡಿ, ಡಿಜಿಟಲೀಕರಣ ಹಿನ್ನೆಲೆ ಬಯೋಮೆಟ್ರಿಕ್​ ವ್ಯವಸ್ಥೆ ಮಾಡಲಾಗಿದ್ದು, ಜಮೀನು ಮಂಜೂರು ಮಾಡಲು, ಯಾವುದೇ ಅನುಮೋದನೆ ಪಡೆಯುವ ವೇಳೆ ಬಗರ್​ ಹುಕುಂ ಸಮಿತಿಯವರ ಬಯೋಮೆಟ್ರಿಕ್​ ಅವಶ್ಯಕತೆಯಿದೆ. ಸಿ.ಎಸ್​.ಪುರ ಹಾಗೂ ಕಡಬ ಹೋಬಳಿಯ ಕೆಲ ಪಂಚಾಯಿತಿಗಳು ಸಮಿತಿ ವ್ಯಾಪ್ತಿಗೆ ಬರಲಿದ್ದು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ತನಿಖೆ ನಡೆಸಿ ವರದಿ ನೀಡಿದ ಬಳಿಕ ವರದಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಮತ್ತೊಮ್ಮೆ ನಾನು ಸ್ಥಳ ಪರಿಶೀಲನೆ ಮಾಡಿ, ಆನ್​ಲೈನ್​ ಮೂಲಕ ಅರ್ಜಿಯನ್ನು ಅನುಮೋದಿ

ಸಲಾಗುವುದು ಎಂದರು.