ಜಿಲ್ಲೆ

ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ

ಶಿವರಾಜ.ಎಂ

ಬೆಂಗಳೂರು ಗ್ರಾಮಾಂತರ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮೂರು ತಿಂಗಳ ಉಚಿತ ಕೌಶಲ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಸೋಮವಾರ ಪ್ರಮಾಣಪತ್ರ ವಿತರಿಸಲಾಯಿತು.

ಈ ಸಂಬಂಧ ಜಿಲ್ಲಾಡಳಿತ ಭವನದ ಜಿಲ್ಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ ಗೌರವಿಸಲಾಯಿತು. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ಜತೆಗೆ ಆರ್ಥಿಕವಾಗಿ ಸಧೃಡರಾಗಬೇಕು ಎಂಬ ಉದ್ದೇಶದಿಂದ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಸೂಕ್ಷ್ಮ ಕೌಶಲ ಪೂರ್ವಭಾವಿ ಅಭಿವೃದ್ಧಿ ತರಬೇತಿ ನೀಡಲಾಗಿದೆ. ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸಿಕೊಡುವ ವಿವಿಧ ಬಗೆಯ ತಿಂಡಿ ತಿನಿಸುಗಳ ತಯಾರಿ, ಕರಕುಶಲ ವಸ್ತುಗಳ ತಯಾರಿ, ಮಾರಾಟ, ಸೀರೆ-ಬಟ್ಟೆ ಉತ್ಪನ್ನಗಳನ್ನು ಮಾರಾಟ ಮುಂತಾದವುಗಳ ಕೌಶಲಾಭಿವೃದ್ಧಿ ತರಬೇತಿಗಳನ್ನು ನೀಡಲಾಗಿದ್ದು. ತರಬೇತಿಯ ಜತೆಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಸ್ವ ಉದ್ಯೋಗ ಸೃಷ್ಟಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೆಶಕ ಪ್ರಸಾದ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ರಾಜೀವ್ ಸುಲೋಚನಾ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು.